ಬೆಂಗಳೂರು: ಹಣವಿಲ್ಲ ಎಂಬ ನೆವವೊಡ್ಡಿ ಸಮವಸ್ತ್ರ ವಿತರಣೆಗೆ ಸರ್ಕಾರ ಕತ್ತರಿ ಹಾಕಿರುವುದರಿಂದ ಇರುವ ಒಂದೇ ಸಮವಸ್ತ್ರವನ್ನು ತೊಟ್ಟು ವಾರವಿಡೀ ಶಾಲೆಗೆ ಹೋಗಬೇಕಾದ ದುಸ್ಥಿತಿ ಸರ್ಕಾರಿ ಶಾಲಾ ಮಕ್ಕಳದ್ದಾಗಿದೆ.
ಶೈಕ್ಷಣಿಕ ವರ್ಷ ಆರಂಭಗೊಂಡು ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರಗಳು ಇನ್ನೂ ವಿತರಣೆಯಾಗಿಲ್ಲ. ರಾಜ್ಯದ ಮಕ್ಕಳಿಗೆ ಅರಿವೆ ಕೊಡಿಸಲು ಕೋಟಿಗಟ್ಟಲೇ ಅನುದಾನ ಬೇಕು. ಅಷ್ಟು ಮೊತ್ತ ಶಿಕ್ಷಣ ಇಲಾಖೆಯ ‘ಲೆಕ್ಕಶೀರ್ಷಿಕೆ’ಯಡಿ ಇಲ್ಲ ಎನ್ನುವ ರಾಜ್ಯದ ಅಧಿಕಾರಿಗಳು, ಕೇಂದ್ರ ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ದೆಹಲಿಯತ್ತ
ಬೊಟ್ಟು ಮಾಡುತ್ತಿದ್ದಾರೆ.
ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆಜೂನ್, ಜುಲೈ ತಿಂಗಳಿನಲ್ಲಿ ಮೊದಲ ಜೊತೆ ಸಮವಸ್ತ್ರಗಳನ್ನು ಹೊಲಿಸಿಕೊಳ್ಳಲು ಬಟ್ಟೆಗಳನ್ನು ಖರೀದಿಸಿ, ವಿತರಿಸಲಾಗಿದೆ. ಆದರೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ಮೂಲಕ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಬಟ್ಟೆಯನ್ನು ಖರೀದಿಸಿ, ಮಕ್ಕಳ ಅಳತೆಗೆ ಅನುಗುಣವಾಗಿ ಹೊಲಿಸಿ ಕೊಡಬೇಕಾಗಿದ್ದ ಎರಡನೇ ಜೊತೆ ಸಮವಸ್ತ್ರಗಳು ಇನ್ನೂ ಮಕ್ಕಳಿಗೆ ತಲುಪಿಲ್ಲ.
ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನು ಒಳಗೊಂಡ ಸಮಿತಿಗಳು ಶಾಲೆಯಲ್ಲಿನ ಮಕ್ಕಳ ಸಂಖ್ಯೆಯನ್ನು ‘ಸ್ಕೂಲ್ ಟ್ರ್ಯಾಕಿಂಗ್ ಸಿಸ್ಟಂ’ ಮೂಲಕ ಇಲಾಖೆಗೆ ಕಳುಹಿಸಿವೆ. ಅದರನ್ವಯ ಬರುವ ಅನುದಾನದಲ್ಲಿ ವಿದ್ಯಾರ್ಥಿಗಳ ಅಂಗಿಗಾಗಿ ತಿಳಿನೀಲಿ ಮತ್ತು ಚಡ್ಡಿ, ಪ್ಯಾಂಟ್, ಸ್ಕರ್ಟ್‌ಗಳಿಗಾಗಿ ಕಡು ನೀಲಿ ಬಣ್ಣದ ಬಟ್ಟೆಗಳು ಖರೀದಿಸಬೇಕಾಗಿದೆ. ಆದರೆ, ಅದಕ್ಕೆ ಬೇಕಾದ ಅನುದಾನವಿನ್ನೂ ಎಸ್‌ಡಿಎಂಸಿ ಖಾತೆಗೆ ಬಂದಿಲ್ಲ. ಕೇಂದ್ರ–ರಾಜ್ಯ ಸರ್ಕಾರಗಳ ಉದಾಸೀನದಿಂದಾಗಿ ಮಕ್ಕಳು ಸಮವಸ್ತ್ರವಿಲ್ಲದೇ ಪರದಾಡುವಂತಾಗಿದೆ.
ಇಲಾಖೆಯು ಎರಡನೇ ಜತೆ ಸಮವಸ್ತ್ರವನ್ನು ಸಹ ಟೆಂಡರ್ ಮೂಲಕ ಖರೀದಿಸಿ, ವಿತರಿಸಲು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಿರ್ಧರಿಸಿದೆ. ಶಾಲೆಗಳು ಆರಂಭವಾದ ಬಳಿಕ, 2013–14ರಿಂದ ವಿತರಿಸುತ್ತಾ ಬಂದಂತೆ ಎಸ್‌ಡಿಎಂಸಿ ಮೂಲಕವೇ ಸಮವಸ್ತ್ರ ನೀಡಲು ಆದೇಶ ಹೊರಡಿಸಿದೆ.
‘ಶಾಲಾಕಲಿಕೆಯ ವರ್ಷದ ಕೊನೆಯಲ್ಲಿ ಯೂನಿಫಾರ್ಮ್ ಕೊಟ್ಟರೆ ಪ್ರಯೋಜನವಿಲ್ಲ. ಯೂನಿಫಾರ್ಮ್,ಪುಸ್ತಕ, ಶೂಗಳನ್ನು ಜೂನ್ ತಿಂಗಳಲ್ಲಿಯೇ ಕಡ್ಡಾಯವಾಗಿ ವಿತರಿಸಬೇಕು’ ಎಂದುವಿದ್ಯಾರ್ಥಿಯೊಬ್ಬರ ಪೋಷಕರಾದ ಭಾಗ್ಯಮ್ಮಒತ್ತಾಯಿಸಿದರು.
ಅಂಕಿ ಸಂಖ್ಯೆ
* 38.60 ಲಕ್ಷ - 1ರಿಂದ 8ನೇ ತರಗತಿಯಲ್ಲಿನ ಶಾಲಾ ಮಕ್ಕಳು
* ₹91 ಕೋಟಿ -ಎರಡನೇ ಬಾರಿ ಸಮವಸ್ತ್ರ ವಿತರಣೆಗೆ ಬೇಕಾದ ಅನುದಾನ
* ₹200 -1ರಿಂದ 5ನೇ ತರಗತಿಯ ಮಕ್ಕಳ 2ನೇ ಸಮವಸ್ತ್ರಕ್ಕಾಗಿ ನೀಡುವ ತಲಾ ಮೊತ್ತ
* ₹300 - 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ನೀಡುವ ತಲಾ ಮೊತ್ತ
******
ಮಕ್ಕಳು ಒಂದೇ ಜೊತೆ ಬಟ್ಟೆಯನ್ನು ವಾರಪೂರ್ತಿ ಉಟ್ಟುಕೊಂಡು ಹೋಗಬೇಕಾಗಿದೆ. ಅವುಗಳು ಹರಿದರೆ, ಹೊಸದನ್ನು ಹೊಲಿಸುವಷ್ಟು ಎಲ್ಲ ಪೋಷಕರು ಶಕ್ತರಾಗಿರುವುದಿಲ್ಲ
– ಸುನೀಲ್ ಇಜಾರಿ, ಸಾಮಾಜಿಕ ಕಾರ್ಯಕರ್ತ, ಕೊಪ್ಪಳ
ಕೇಂದ್ರ ಸರ್ಕಾರದಿಂದಸರ್ವಶಿಕ್ಷಣ ಅಭಿಯಾನದಡಿ ಸಕಾಲಕ್ಕೆ ಅನುದಾನ ಬಂದಿಲ್ಲ. ಹಾಗಾಗಿ ಎರಡನೇ ಜೊತೆ ಸಮವಸ್ತ್ರಗಳ ವಿತರಣೆಯಲ್ಲಿ ವಿಳಂಬ ಆಗಿದೆ
– ಡಾ.ಪಿ.ಸಿ.ಜಾಫರ್,ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.