ADVERTISEMENT

ಬಾಲ್ಯವಿವಾಹ | ಸಾಮಾಜಿಕ ಪಿಡುಗು ಮೆಟ್ಟಿನಿಂತ ಬಾಲಕಿ: ಪರೀಕ್ಷೆಯಲ್ಲಿ ಪಾರಮ್ಯ

ಇಮಾಮ್‌ಹುಸೇನ್‌ ಗೂಡುನವರ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಳಗಾವಿ: ಪಾಲಕರಿಂದ ಒತ್ತಡಕ್ಕೆ ಸಿಲುಕಿ ಒಲ್ಲದ ಮನಸ್ಸಿನಿಂದ ಬಾಲ್ಯವಿವಾಹವಾಗಿ, ಬಳಿಕ ಮನೆಯಿಂದ ತಪ್ಪಿಸಿಕೊಂಡು ಹಾಸ್ಟೆಲ್‌ ಸೇರಿದ್ದ ವಿದ್ಯಾರ್ಥಿನಿಯೊಬ್ಬರು, ಪಿಯು ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ 94.16 ಅಂಕ ಗಳಿಸಿ‌‌ದ್ದಾರೆ. ‘ಅಕ್ಷರ ಕಲಿಯಬೇಕಾದ ವಯಸ್ಸಿನಲ್ಲಿ ಮಕ್ಕಳ ಮದುವೆ ಮಾಡಬಾರದು’ ಎಂದು ಕೋರಿದ್ದಾರೆ.

ರಾಯಬಾಗ ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98.40 ಅಂಕ ಗಳಿಸಿದ್ದರು. ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡಲು ರಾಯಬಾಗದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆದರು. ಆದರೆ, ಪಿಯು ಪ್ರಥಮ ವರ್ಷದಲ್ಲಿದ್ದಾಗಲೇ (2022ರ ಜುಲೈ) ಹೆತ್ತವರು ಬಾಲ್ಯವಿವಾಹ ಮಾಡಿಸಿದರು. ಶಿಕ್ಷಣ ಮೊಟಕುಗೊಳಿಸಿ, ಗಂಡನ ಮನೆಗೆ ಕಳುಹಿಸಲು ತೀರ್ಮಾನಿಸಿದರು. ಆದರೆ, ಇದಕ್ಕೆ ಆಕ್ಷೇಪಿಸಿದ ಬಾಲಕಿಯ ನೆರವಿಗೆ ಬಂದಿದ್ದು ಮಕ್ಕಳ ಸಹಾಯವಾಣಿ ಸಂಖ್ಯೆ 1098.‌

ADVERTISEMENT

ಬಾಲಕಿಯ ಕರೆಗೆ ಸ್ಪಂದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಮನೆಗೆ ಬಂದು ಆಕೆಯನ್ನು ರಕ್ಷಿಸಿದರು. ರಾಯಬಾಗದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿ, ನಂತರ ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿದರು. ಸಮಿತಿ ಆದೇಶದಂತೆ, ಸವದತ್ತಿಯ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಪ್ರವೇಶ ಕಲ್ಪಿಸಿ, ರಾಯಬಾಗದ ಕಾಲೇಜಿನಲ್ಲೇ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು.

ಹಲವು ಸವಾಲು, ಸಂಕಷ್ಟ ಎದುರಿಸಿ ಬಾಲಕಿ ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾದರು. ಕನ್ನಡ ವಿಷಯದಲ್ಲಿ 98, ಇಂಗ್ಲಿಷ್‌ನಲ್ಲಿ 85, ಇತಿಹಾಸದಲ್ಲಿ 99, ಅರ್ಥಶಾಸ್ತ್ರದಲ್ಲಿ 93, ರಾಜ್ಯಶಾಸ್ತ್ರದಲ್ಲಿ 97, ಸಮಾಜಶಾಸ್ತ್ರದಲ್ಲಿ 93 ಅಂಕ ಗಳಿಸಿದರು.

‘ಪ್ರತಿ ಮಗುವಿಗೆ ತನ್ನಿಷ್ಟದಂತೆ ಕಲಿಯುವ ಹಕ್ಕಿದೆ. ಜವಾಬ್ದಾರಿ ಕಳೆದುಕೊಳ್ಳಲೆಂದೇ ಬಾಲ್ಯದಲ್ಲೇ ಹೆಣ್ಣುಮಕ್ಕಳ ಮದುವೆ ಮಾಡಬೇಡಿ. ಅವರ ಭವಿಷ್ಯಕ್ಕೆ ಕಂಟಕವಾಗಬೇಡಿ’ ಎಂಬ ಕಳಕಳಿ ಬಾಲಕಿಯದ್ದು. ಕಲಾ ಪದವಿಗೆ ಪ್ರವೇಶ ಪಡೆಯಲಿರುವ ಆಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿ ಐಎಎಸ್‌ ಅಧಿಕಾರಿಯಾಗುವ ಗುರಿ ಹೊಂದಿದ್ದಾರೆ.

ಮೊಮ್ಮಗಳ ಸಾಧನೆ ಖುಷಿ ತಂದಿದೆ. ಬಾಲ್ಯವಿವಾಹ ಯಾಕಾದರೂ ಮಾಡಿಕೊಟ್ಟೆವೋ ಎಂಬ ಬೇಸರವೂ ಇದೆ. ಜನರಿಗೆ ಮುಖ ತೋರಿಸಲು ಆಗದ ಸ್ಥಿತಿ ಇದೆ.
–ಸಾಧಕ ವಿದ್ಯಾರ್ಥಿನಿಯ ಅಜ್ಜಿ
18 ವರ್ಷ ತುಂಬಿದ ನಂತರ, ಬಾಲಕಿಗೆ ಮಹಿಳೆಯರ ಅನುಪಾಲನಾ ಗೃಹದಲ್ಲಿ ಆಶ್ರಯ ಕಲ್ಪಿಸುತ್ತೇವೆ. ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತೇವೆ.
–ಮಹಾಂತೇಶ ಭಜಂತ್ರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.