ಹುಬ್ಬಳ್ಳಿ: ಎಸ್ಎಸ್‌ಎಲ್‌ಸಿ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಬಾರಿ 10ನೇ ತರಗತಿಗೆ ಮರು ದಾಖಲಾತಿ ಪಡೆಯಲು ಅವಕಾಶ ಕಲ್ಪಿಸಿದೆ.
ಮರು ದಾಖಲಾತಿಯಾದವರನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಪರಿಗಣಿಸಿ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಬಿಸಿಯೂಟ ಸೇರಿ ಎಲ್ಲ ಕಲಿಕಾ ಸಾಮಗ್ರಿ ಒದಗಿಸಲಾಗುತ್ತದೆ. ಆದರೂ, ಶಾಲೆಗೆ ಮರು ದಾಖಲಾತಿ ಪಡೆಯಲು ಈ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ 8,62,659 ವಿದ್ಯಾರ್ಥಿಗಳು ಹಾಜರಾಗಿದ್ದರು. 6,32,151 ವಿದ್ಯಾರ್ಥಿಗಳು ಉತ್ತೀರ್ಣರಾದರೆ, 2,30,508 ಮಂದಿ ಅನುತ್ತೀರ್ಣಗೊಂಡರು. ಮೊದಲ ಪೂರಕ ಪರೀಕ್ಷೆಯಲ್ಲಿ 2,23,292ರಲ್ಲಿ 69,541 ವಿದ್ಯಾರ್ಥಿಗಳು ಹಾಗೂ ಎರಡನೇ ಪೂರಕ ಪರೀಕ್ಷೆಯಲ್ಲಿ 97,952ರಲ್ಲಿ 25,452 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾದರು. ವಾರ್ಷಿಕ ಹಾಗೂ ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ 1,35,515 ವಿದ್ಯಾರ್ಥಿಗಳಲ್ಲಿ ಮರು ದಾಖಲಾತಿ ಪಡೆದವರು 2,096 ಮಾತ್ರ.
ಮರು ದಾಖಲಾತಿ ಹೆಚ್ಚಿಸಲು ಆದ್ಯತೆ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಸೂಚಿಸಿದೆ. ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಶಾಲಾ ಮರುದಾಖಲಾತಿ ಪ್ರಕ್ರಿಯೆ ನೆರವೇರುತ್ತಿಲ್ಲ.
ಉಡುಪಿ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಮರು ದಾಖಲಾತಿ ಶೂನ್ಯವಿದೆ. 13 ಜಿಲ್ಲೆಗಳಲ್ಲಿ ಒಂದಂಕಿಯೂ ದಾಟಿಲ್ಲ. ದಕ್ಷಿಣ ಕನ್ನಡ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮರು ದಾಖಲಾತಿ ಪಡೆದಿದ್ದಾರೆ.
‘ಮರು ದಾಖಲಾತಿ ಪಡೆದ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ ವಿಷಯಗಳಿಗೆ ಅಥವಾ ಇಚ್ಛಾನುಸಾರ ಎಲ್ಲ ವಿಷಯಗಳಿಗೆ ಪರೀಕ್ಷೆ ಬರೆಯುವ ಅವಕಾಶವಿದೆ. ಆದರೆ, ಬಹುತೇಕರಿಗೆ ಮುಜುಗರ ಮತ್ತು ಶಿಕ್ಷಣ ಮುಂದುವರಿಸಲು ನಿರಾಸಕ್ತಿಯಿದೆ. ಅಂತಹ ವಿದ್ಯಾರ್ಥಿಗಳು ಮತ್ತು ಪೋಷಕರ ಮನವೊಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಹೇಳಿದರು.
10ನೇ ತರಗತಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮರು ದಾಖಲಾತಿಗೆ ಜಾಗೃತಿ ಮೂಡಿಸಲು ಹಾಗೂ ದಾಖಲಾತಿ ಪಡೆದವರಿಗೆ ಶೈಕ್ಷಣಿಕ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
10ನೇ ತರಗತಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮರು ದಾಖಲಾತಿಯ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಶಾಲೆಗೆ ದಾಖಲಾತಿ ಪಡೆಯಲು ಈಗಲೂ ಅವಕಾಶ ಇದೆಕೆ.ವಿ. ತ್ರಿಲೋಕಚಂದ್ರ ಆಯುಕ್ತ ಶಾಲಾ ಶಿಕ್ಷಣ ಇಲಾಖೆ
- ಮರು ದಾಖಲಾತಿ ಎಷ್ಟು?
ಬೆಂಗಳೂರು ಉತ್ತರ ಚಾಮರಾಜನಗರ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಗಳಲ್ಲಿ ತಲಾ ಒಂದು ಧಾರವಾಡ ಬೀದರ್ ಹಾಗೂ ಚಿಕ್ಕಮಗಳೂರು ತಲಾ ಎರಡು ಶಿವಮೊಗ್ಗ ವಿಜಯನಗರ ತಲಾ ಮೂರು ತುಮಕೂರು ಬಳ್ಳಾರಿ ತಲಾ ಐದು ಹಾವೇರಿ– ಆರು ಶಿರಸಿ– ಏಳು ಕೋಲಾರ– ಒಂಬತ್ತು ಮರು ದಾಖಲಾತಿ ಪಡೆದಿದ್ದಾರೆ. ಮಂಡ್ಯ–11 ಕೊಪ್ಪಳ–12 ಗದಗ ರಾಮನಗರ ತಲಾ 14 ಚಿಕ್ಕಬಳ್ಳಾಪುರ ದಾವಣಗೆರೆ ತಲಾ 16 ಹಾಸನ–18 ಬೆಂಗಳೂರು ಗ್ರಾಮಾಂತರ–19 ಬೆಳಗಾವಿ–20 ಕೊಡಗು ಬಾಗಲಕೋಟೆ ತಲಾ 23 ಚಿಕ್ಕೋಡಿ– 24 ವಿಜಯಪುರ–25 ಚಿತ್ರದುರ್ಗ–57 ಮೈಸೂರು– 58 ಬೆಂಗಳೂರು ದಕ್ಷಿಣ–66 ರಾಯಚೂರು–77 ಯಾದಗಿರಿ– 240 ಕಲಬುರಗಿ– 270 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1046 ಸೇರಿ ರಾಜ್ಯದಲ್ಲಿ 2096 ವಿದ್ಯಾರ್ಥಿಗಳು ಮರು ದಾಖಲಾತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.