ಹೊಸಪೇಟೆ: ಇಲ್ಲಿನ ಬಾಲಕಿಯರ ಕಾಲೇಜಿನಲ್ಲಿ ಶುಕ್ರವಾರ ಅರ್ಥಶಾಸ್ತ್ರ, ಭೌತಶಾಸ್ತ್ರ ವಿಷಯದ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಕೊಠಡಿ ಹೊರಗಿನ ಕಟ್ಟೆ ಮೇಲೆ ಬಿಸಿಲಿನಲ್ಲೇ ಬರೆದರು.
ಬೆಳಿಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದು, ನೋಂದಣಿ ಸಂಖ್ಯೆ ನೋಡಿಕೊಂಡು ಹುಡುಕಾಡಿದಾಗ ಕಟ್ಟೆ ಮೇಲಿನ ಬೆಂಚ್‌ಗಳ ಮೇಲೆ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಿರುವುದನ್ನು ಕಂಡು ದಂಗಾದರು. ಈ ಪೈಕಿ ಕೆಲ ವಿದ್ಯಾರ್ಥಿಗಳ ಪೋಷಕರು, ವಿಷಯ ಗಮನಕ್ಕೆ ಬರುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದರು.
‘ಬಿಸಿಲಿನಲ್ಲಿ ಕೂರಿಸಿ ಪರೀಕ್ಷೆ ಬರೆಸಲು ಮುಂದಾಗಿರುವುದು ಸರಿಯಲ್ಲ. ಕೂಡಲೇ ಬೇರೆ ಕಡೆ ವ್ಯವಸ್ಥೆ ಮಾಡಬೇಕು’ ಎಂದು ಪೋಷಕ ನಿಂಬಗಲ್ ರಾಮಕೃಷ್ಣ ಆಗ್ರಹಿಸಿದರು.
‘ಈಗ ಬೇರೆ ಕಡೆ ವ್ಯವಸ್ಥೆ ಮಾಡಲು ಆಗುವುದಿಲ್ಲ. ಬಿಸಿಲು ಬೀಳದಂತೆ ಶಾಮಿಯಾನ ಹಾಕಲಾಗುವುದು’ ಎಂದು ಕಾಲೇಜಿನ ಪ್ರಾಚಾರ್ಯ ಜೆ. ಸಿದ್ದರಾಮ ಭರವಸೆ ಕೊಟ್ಟರು. ಕೆಲನಿಮಿಷಗಳ ಬಳಿಕ ಶಾಮಿಯಾನ ಹಾಕಿಸಿ, ಪರೀಕ್ಷೆ ಬರೆಸಿದರು.
‘ಅರ್ಥಶಾಸ್ತ್ರ ವಿಷಯದ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಸಿದ 779 ವಿದ್ಯಾರ್ಥಿಗಳ ಪೈಕಿ 736 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 43 ಗೈರಾಗಿದ್ದರು. ಭೌತಶಾಸ್ತ್ರಕ್ಕೆ 154 ವಿದ್ಯಾರ್ಥಿಗಳಲ್ಲಿ ಮೂವರು ಗೈರಾಗಿದ್ದರು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಸಂಖ್ಯೆ ಇಲ್ಲ ಎಂದು ಮೊದಲೇ ಮೇಲಧಿಕಾರಿಗಳಿಗೆ ತಿಳಿಸಿದ್ದೆವು. ಆದರೂ ಅವರು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಅನಿವಾರ್ಯವಾಗಿ ವಿದ್ಯಾರ್ಥಿಗಳನ್ನು ಕೊಠಡಿ ಹೊರಭಾಗದಲ್ಲಿ ಕೂರಿಸಿ ಪರೀಕ್ಷೆ ಬರೆಸಬೇಕಾಯಿತು’ ಎಂದು ಸಿದ್ದರಾಮ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಮಿಯಾನ ಹಾಕಿದ್ದರೂ ಬಿಸಿಲಿನ ಝಳದಿಂದ ಸಮಸ್ಯೆ ಉಂಟಾಯಿತು. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ವರ್ಷವಿಡೀ ಓದಿದ್ದು ಹಾಳಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬಳಿಕ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.