ಬೆಂಗಳೂರು: ರಾಜ್ಯದ ಆರು ವಿಶ್ವವಿದ್ಯಾಲಯಗಳ 30 ವಿದ್ಯಾರ್ಥಿಗಳು ನ.9ರಂದು ಬ್ರಿಟನ್‌ನ ‘ಈಸ್ಟ್ ಲಂಡನ್’ ವಿಶ್ವವಿದ್ಯಾಲಯಕ್ಕೆ ಅಧ್ಯಯನ ಪ್ರವಾಸ ತೆರಳುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ರಾಯಚೂರು, ಗುಲ್ಬರ್ಗಾ, ತುಮಕೂರು, ಬೆಂಗಳೂರು ನಗರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ತಲಾ ಐವರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸೇರಿ 40 ಮಂದಿ ತೆರಳಲಿದ್ದಾರೆ ಎಂದರು.
15 ದಿನದ ಪ್ರವಾಸದಲ್ಲಿ ನಾವೀನ್ಯತೆ ಮತ್ತು ಸಂಶೋಧನಾ ಕ್ಷೇತ್ರ ಕುರಿತು ಅಂತರಾಷ್ಟ್ರೀಯ ಅಧ್ಯಯನ ನಡೆಸಲಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಅಧ್ಯಯನ, ಸೃಜನಶೀಲ ಚಿಂತನೆಯ ಮೂಲಕ ಸ್ಥಳೀಯ ಸವಾಲು ಮತ್ತು ಸಮಸ್ಯೆಗಳನ್ನು ಬಗೆಹರಿಸುವುದು, ಉದ್ಯಮಶೀಲತೆ, ಕೌಶಲದ ಮಾಹಿತಿ ಪಡೆಯುವರು ಎಂದು ವಿವರ ನೀಡಿದರು.
ಆರು ವಿ.ವಿಗಳು ₹30 ಲಕ್ಷ ನೆರವು ನೀಡಿವೆ. ಉಳಿದ ಹಣವನ್ನು ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. ವಾಸ್ತವ್ಯ, ಊಟದ ವ್ಯವಸ್ಥೆ ಮಾಡುತ್ತದೆ. ಸರ್ಕಾರಿ ಕಾಲೇಜುಗಳ ಬಡ, ಮಧ್ಯಮ ವರ್ಗದ ಎಲ್ಲ 30 ವಿದ್ಯಾರ್ಥಿಗಳು ಇದೇ ಮೊದಲ ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮ ಪ್ರತಿ ವರ್ಷವೂ ಮುಂದುವರಿಸಲು ಚಿಂತನೆ ನಡೆದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.