ಬೆಂಗಳೂರು: ಹೊಸದಾಗಿ ರಚಿಸಲಾಗಿರುವ 50 ತಾಲ್ಲೂಕುಗಳ ಪೈಕಿ ಐದು ಜಿಲ್ಲೆಗಳ ಎಂಟು ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಒಟ್ಟು 32 ಹುದ್ದೆಗಳನ್ನು ಸೃಜಿಸಿ ಕಂದಾಯ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ, ಕೊಪ್ಪಳ ಜಿಲ್ಲೆಯ ಕುಕನೂರು ಮತ್ತು ಕನಕಗಿರಿ, ರಾಯಚೂರು ಜಿಲ್ಲೆಯ ಸಿರಿವಾರ, ಉಡುಪಿ ಜಿಲ್ಲೆಯ ಕಾಪು, ವಿಜಯಪುರ ಜಿಲ್ಲೆಯ ಬಬಲೇಶ್ವರ, ತಿಕೋಟಾ ಮತ್ತು ತಾಳಿಕೋಟೆ ತಾಲ್ಲೂಕುಗಳಲ್ಲಿ ನೂತನವಾಗಿ ಉಪ ನೋಂದಣಿ ಕಚೇರಿ ಆರಂಭಿಸಲು ಇಲಾಖೆ ಒಪ್ಪಿಗೆ ನೀಡಲಾಗಿದೆ.
ಪ್ರತಿ ಕಚೇರಿಗೆ ತಲಾ ಒಬ್ಬ ಉಪ ನೋಂದಣಿ ಅಧಿಕಾರಿ, ಒಬ್ಬ ಪ್ರಥಮ ದರ್ಜೆ ಸಹಾಯಕ, ಒಬ್ಬ ಡೇಟಾ ಎಂಟ್ರಿ ಆಪರೇಟರ್ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ‘ಡಿ’ ದರ್ಜೆ ನೌಕರ ಹುದ್ದೆಗೆ ಮಂಜೂರಾತಿ ನೀಡಲಾಗಿದೆ.
ಹೊಸದಾಗಿ ರಚಿಸಲಾಗಿರುವ 50 ತಾಲ್ಲೂಕುಗಳ ಪೈಕಿ 34 ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಎಂಟು ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.