ಸಂಡೂರು: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದ ಟಿ.ವಿಜಯಕುಮಾರ್ 953ನೇ ರ‍್ಯಾಂಕ್ ಪಡೆದಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ಯಿಂದ ನಡೆಸಿದ ಸಂದರ್ಶನ ಇಲ್ಲಿದೆ...
ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಹೇಳಿ
ಸಂಡೂರು ತಾಲ್ಲೂಕಿನ ಚೋರನೂರು ನಮ್ಮ ಸ್ವಗ್ರಾಮ. ತಂದೆ ಟಿ. ಅಡಿವೆಪ್ಪ ಉದ್ಯಮಿ, ತಾಯಿ ಎಂ.ಟಿ ಮಣಿಯಮ್ಮ ಸರ್ಕಾರಿ ಶಾಲಾ ಶಿಕ್ಷಕಿ. ಅಣ್ಣ ದೀಪಕ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಅಕ್ಕ ಗೃಹಿಣಿಯಾಗಿದ್ದಾರೆ. ನನ್ನ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಚೋರನೂರು ಸರ್ಕಾರಿ ಶಾಲೆಯಲ್ಲಿ ಪಡೆದಿದ್ದೇನೆ. ಆನಂತರ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ನವೋದಯ ಶಾಲೆ, ನಂತರ ಪಿಯುಸಿಯನ್ನು ಹೈದರಾಬಾದ್‌ನ ನಾರಾಯಣ ಜೂನಿಯರ್ ಕಾಲೇಜಿನಲ್ಲಿ ಓದಿದ್ದೇನೆ. ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಆ್ಯಂಡ್ ಮ್ಯಾನೆಜ್‌ಮೆಂಟ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದೇನೆ.
ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ಹೇಗಿತ್ತು?
ಯುಪಿಎಸ್ಸಿ ಪರೀಕ್ಷೆ ಸಲುವಾಗಿ ದೆಹಲಿಯ ವಾಜಿರಾಮ್ ಮತ್ತು ರವಿ ಕೋಚಿಂಗ್ ಸೆಂಟರ್ ನಲ್ಲಿ 10 ತಿಂಗಳುಗಳ ಕಾಲ ಕೋಚಿಂಗ್ ಪಡೆದುಕೊಂಡೆ. ನಂತರ ಸ್ವಯಂ ಅಧ್ಯಯನ ನಡೆಸಿದ್ದೇನೆ. ತಂದೆಯವರ ಆಸೆ ನಾನು ಐಎಎಸ್ ಆಗಬೇಕು ಎಂಬುದಿತ್ತು. ಆರಂಭದಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಓದುತ್ತಾ ಹೋದಂತೆ ಆಸಕ್ತಿ ಬೆಳೆದು ಯುಪಿಎಸ್‌ಸಿ ಪಾಸಾಗಲು ಸಾಧ್ಯವಾಗಿದೆ. 2017-18 ರ ಬ್ಯಾಚ್ನಲ್ಲಿ ಕೆಪಿಎಸ್‌ಸಿ ಪರೀಕ್ಷೆ ಪಾಸಾದೆ. ಸದ್ಯ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಮುಖ್ಯಪರೀಕ್ಷೆ ಸಿದ್ಧತೆ ಹೇಗಿತ್ತು?
ಮುಖ್ಯ ಪರೀಕ್ಷೆಗಾಗಿ ಮಾಕ್ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಆರಂಭದಲ್ಲಿ ಬರಹಕ್ಕೆ ಹೆಚ್ಚು ಒತ್ತು ನೀಡರಲಿಲ್ಲ. ಆನಂತರ ಹೆಚ್ಚು ಹೆಚ್ಚು ಬರೆಯಲು ಪ್ರಾಮುಖ್ಯತೆ ನೀಡಿದೆ.
ಸಂದರ್ಶನದ ಅನುಭವ ಹೇಗಿತ್ತು?
ಇದು ನನ್ನ 4ನೇ ಸಂದರ್ಶನ ಆಗಿದ್ದರಿಂದ ಯಾವ ರೀತಿ ಪ್ರಶ್ನೆ ಕೇಳಬಹುದು ಎಂಬ ಗ್ರಹಿಕೆ ಇತ್ತು. ಸಂದರ್ಶನ ಎಂದರೆ ವ್ಯಕ್ತಿತ್ವ ಪರೀಕ್ಷೆ ಮಾಡುವುದು ಎಂಬ ತಿಳಿವಳಿಕೆ ಇದ್ದರಿಂದ ನನ್ನ ವ್ಯಕ್ತಿತ್ವವನ್ನು ಸಂದರ್ಶನಕ್ಕಾಗಿ ಸಜ್ಜುಗೊಳಿಸಿಕೊಂಡೆ. ಪ್ರಸ್ತುತ ನನ್ನ ಹುದ್ದೆ ಬಗ್ಗೆ ಕೇಳಲಾಯಿತು. ಸಂದರ್ಶನ ಎಂದರೆ ಬೋರ್ಡ್‌ನ ಎಲ್ಲಾ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ವಿಶ್ವಾಸದಲ್ಲಿರಿಸಿಕೊಂಡು ಉತ್ತರಿಸುವುದು ಒಳಿತು ಎಂಬುದನ್ನು ಅರಿತಿದ್ದರಿಂದ ಅದೇ ರೀತಿ ಉತ್ತರಿಸಿದೆ. ಜಿಲ್ಲಾ ಕಾರಾಗೃಹ ಅಧೀಕ್ಷಕ ಆಗಿರುವುದರಿಂದ ಕೈದಿಗಳ ಕುರಿತು, ಕೈದಿಗಳು ಜೈಲಲ್ಲಿದ್ದುಕೊಂಡು ಸಕ್ರಿಯವಾಗಿ ಹೊರಗಿನ ವ್ಯವಹಾರಗಳನ್ನು ನಡೆಸುವ ಕುರಿತು ಮತ್ತು ಅವರನ್ನು ನಿಯಂತ್ರಿಸುವುದು ಸೇರಿದಂತೆ ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಯಿತು.
ಓದುವ ಪ್ಲ್ಯಾನ್’ ಹೇಗಿತ್ತು ?
ಈ ಬಾರಿ ಮೇನ್ಸ್‌ನಲ್ಲಿ ಸಾಮಾನ್ಯ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದೆ. ಆಪ್ಶನಲ್‌ಗೆ ಕಡಿಮೆ ಪ್ರಾಮುಖ್ಯತೆ ನೀಡಿದ್ದೇನೆ. ಬೆಳಿಗ್ಗೆ ಎದ್ದ ತಕ್ಷಣ ಒಂದು ತಾಸು ಓದುವುದರಿಂದ ದಿನಪೂರ್ತಿ ಓದಿನ ಮನಸ್ಥಿತಿ ಇರುವುದು ಹಾಗೂ ರಾತ್ರಿ ಮಲಗುವಾಗ ಮನನ ಮಾಡಿದರೆ ಅದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ ಎಂಬುದು ನನ್ನ ನಂಬಿಕೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಅರ್ಧಗಂಟೆ ಕಾಲ ದಿನಪತ್ರಿಕೆ ಓದುತ್ತಿದ್ದೆ. ಮಧ್ಯಾಹ್ನದ ತನಕ ಸಾಮಾನ್ಯ ಅಧ್ಯಯನ ಅಭ್ಯಾಸ ಮಾಡಿ ಮದ್ಯಾಹ್ನದ ಸಮಯದಲ್ಲಿ ಉತ್ತರಗಳನ್ನು ಬರೆಯುತ್ತಿದ್ದೆ. ಸಾಮಾಜಿಕ ಜಾಲ ತಾಣಗಳಿಂದ ಸಾಧ್ಯವಾದಷ್ಟು ದೂರವಿದ್ದು ಸ್ನೇಹಿತರೊಂದಿಗೆ ಚರ್ಚೆಗೆ ಪ್ರಾಶಸ್ತ್ಯ ನೀಡುತ್ತಿದ್ದೆ.
ಅಧ್ಯಯನ ಸಾಮಗ್ರಿಗಳ ಆಯ್ಕೆ ಹೇಗಿರಬೇಕು ?
ಅಧ್ಯಯನ ಸಾಮಾಗ್ರಿ ಸಾಧ್ಯವಾದಷ್ಟು ಸಂಕ್ಷಿಪ್ತವಾಗಿದ್ದರೆ ಒಳ್ಳೆಯದು. ವಿಷಯಗಳು ಒಳಗೊಂಡಿರುವ ಚಿಕ್ಕಚಿಕ್ಕ ನೋಟ್ಸ್‌ಗಳನ್ನು ಓದುವುದು ಉತ್ತಮ. ನಾನು ಅವಶ್ಯಕತೆಗಿಂತ 15-20 ಪಟ್ಟು ಹೆಚ್ಚು ಓದಿದ್ದೇನೆ. ಅದೇ ನನಗೆ ಶಾಪ ಆಯ್ತು. ಎಷ್ಟು ಬೇಕೋ ಅಷ್ಟನ್ನು ಮಾತ್ರ ಓದುವುದೊಳಿತು. ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ರೂಪರೇಷದ ಬಗ್ಗೆ ತಿಳಿಯಲು ಸಹಕಾರಿ ಆಗಲಿದೆ.
ಪರೀಕ್ಷಾ ಯಶಸ್ಸಿಗೆ ಕೋಚಿಂಗ್ ಅಗತ್ಯವೇ ?
ಪರೀಕ್ಷೆಗೆ ಕೋಚಿಂಗ್ ಅತ್ಯವಶ್ಯಕ ಎಂಬ ನಿಯಮವೇನೂ ಇಲ್ಲ. ಪರೀಕ್ಷೆ ಎದುರಿಸಿ ಯಶಸ್ಸು ಕಂಡಿರುವವರ ಜೊತೆ ಚರ್ಚಿಸಿ ಸ್ವಯಂ ತಯಾರಿ ನಡೆಸಿಯೂ ತೇರ್ಗಡೆ ಹೊಂದಬಹುದು. ಪರೀಕ್ಷೆ ಕುರಿತು ತಿಳಿದುಕೊಂಡರೆ ಸ್ವಂತ ಓದಬಹುದು.
ದಿನಪತ್ರಿಕೆಗಳ ಓದು ಎಷ್ಟು ಅವಶ್ಯಕ ?
ದಿನ ಪತ್ರಿಕೆ ಓದುವುದು ಅತ್ಯಂತ ಅವಶ್ಯಕ ಸಂಗತಿ. ಪರೀಕ್ಷೆಯ ಶೇ 50ರಷ್ಟು ಪ್ರಶ್ನೆಗಳು ಪತ್ರಿಕೆಗಳಿಂದಲೇ ಕೇಳುತ್ತಾರೆ. ಅದರಲ್ಲೂ ಪ್ರಚಲಿತ ವಿದ್ಯಮಾನಗಳ ಜ್ಞಾನ ಅತ್ಯವಶ್ಯ. ಯಾವುದೇ ಕಾರಣಕ್ಕೂ ಪತ್ರಿಕೆ ಓದುವುದನ್ನು ಕಡೆಗಣಿಸುವಂತಿಲ್ಲ.
ಎಷ್ಟನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ ?
ನಾನು ಯುಪಿಎಸ್‌ಸಿ ಪರೀಕ್ಷೆಯನ್ನು 8 ಬಾರಿ ಬರೆದಿದ್ದೇನೆ. ಇದು ನಾಲ್ಕನೇ ಸಂದರ್ಶನವಾಗಿದ್ದು ಈ ಬಾರಿ 953 ನೇ ರ‍್ಯಾಂಕ್ ದೊರೆತಿದೆ.
ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ನಿಮ್ಮ ಸಲಹೆ
ನನ್ನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ನಾನು ಕನ್ನಡ ಮಾದ್ಯಮದಲ್ಲಿ ಅಭ್ಯಾಸ ಮಾಡಿದ್ದೇನೆ. ಉಳಿದಂತೆ ನನ್ನ ಸಂಪೂರ್ಣ ವಿದ್ಯಾಭ್ಯಾಸ ಇಂಗ್ಲಿಷ್ ಮಾದ್ಯಮದಲ್ಲಿ ಪೂರ್ಣಗೊಳಿಸಿದ್ದೇನೆ. ಆದ್ದರಿಂದ ಕನ್ನಡ ಮಾದ್ಯಮ ಅಭ್ಯರ್ಥಿಗಳಿಗೆ ನಾನು ಏನೂ ಸಲಹೆ ನೀಡಲಾರೆ
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ನಿಮ್ಮ ಕಿವಿ ಮಾತೇನು ?
ಪರೀಕ್ಷೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಓದಿ. ಇಷ್ಟೇ ಸಮಯ ಓದಬೇಕು ಎನ್ನುವುದಕ್ಕಿಂತ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಸಮಯ ಓದಿಗೆ ಮೀಸಲಿಡಿ. ಎಲ್ಲಿಯೂ ಸಮಯವನ್ನು ವ್ಯರ್ಥ ಮಾಡದೇ ಅಧ್ಯಯನದಲ್ಲಿ ತೊಡಗುವುದರಿಂದ ಯಶಸ್ಸು ಖಂಡಿತಾ ಒಲಿಯುತ್ತದೆ.
ಕುಟುಂಬದ ಸಹಕಾರ ಹೇಗಿತ್ತು ?
ಓದುವ ಕೆಲಸವನ್ನು ಮಾತ್ರ ನಾನು ಮಾಡಿದ್ದೇನೆ. ಉಳಿದಂತೆ ಎಲ್ಲಾ ಸಹಕಾರ ನಮ್ಮ ಕುಟುಂಬದ್ದೆ. ಪ್ರತಿ ಹಂತದಲ್ಲೂ ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. ಇಲ್ಲಿ ನಾನು ಕೇವಲ ಮಾದ್ಯಮವಷ್ಟೆ. ಯಾವುದೇ ಆಕಾಂಕ್ಷಿಗೆ ಕುಟುಂಬದವರ ಸಹಕಾರ ಬಹಳ ಮುಖ್ಯ ಹಾಗೆಯೇ ಆ ಜವಾಬ್ದಾರಿಯನ್ನು ನನ್ನ ಕುಟುಂಬದವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರಿಂದಲೇ ನಾನಿಂದು ಯಶಸ್ಸು ಕಾಣಲು ಸಾಧ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.