ಚಿತ್ರದುರ್ಗ: ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೈಡ್ರಾಮಾ ಭಾನುವಾರ ರಾತ್ರಿ ನಡೆದಿದೆ.
ಮರಳು ಗಣಿಗಾರಿಕೆ ವಿಚಾರದಲ್ಲಿ ಅಮಾಯಕರ ಮೇಲೆ ಪೊಲೀಸರು ಕೇಸು ಹಾಕುತ್ತಿದ್ದ ವಿಚಾರಕ್ಕೆ ಆಕ್ರೋಶಗೊಂಡು ಪೊಲೀಸ್ ಠಾಣೆ ಎದುರೇ ಇಂತಹ ಪ್ರಯತ್ನ ನಡೆಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಮರಳು ಗಣಿಗಾರಿಕೆ ವಿಚಾರದಲ್ಲಿ ಪೊಲೀಸರು ಹಾಗೂ ಶಾಸಕರ ನಡುವೆ ತಿಕ್ಕಾಟ ನಡೆಯುತ್ತಿತ್ತು. ಅಮಾಯಕರ ಮೇಲೆ ಕೇಸು ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಹೊಸದುರ್ಗ ಠಾಣೆ ಎದುರು ಪ್ರತಿಭಟನೆ ನಡೆಸಿದ ಗೂಳಿಹಟ್ಟಿ, ಭಾನುವಾರ ರಾತ್ರಿ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಬೆಂಕಿ ಹಚ್ಚಿಕೊಳ್ಳಲು ಮುಂದಾದ ಶಾಸಕರನ್ನು ತಕ್ಷಣ ಬೆಂಬಲಿಗರು ಹಾಗೂ ಪೊಲೀಸರು ತಡೆದಿದ್ದಾರೆ.
ಕಣ್ಣು ಹಾಗೂ ಮೂಗಿನಲ್ಲಿ ಪೆಟ್ರೋಲ್ ಹೋಗಿರುವ ಪರಿಣಾಮ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.