ಮೈಸೂರು: ‘ತಂದೆ ಹೋಗಿ ಬಿಟ್ಟಿದ್ದರು, ತಾಯಿಯನ್ನಾದರೂ ದೇವರು ಕರುಣಿಸುತ್ತಾನೆ ಎಂದು ನಂಬಿಕೊಂಡಿದ್ದೆವು. ಆದರೆ, ಆಕೆಯನ್ನೂ ಕಿತ್ತುಕೊಂಡ’ ಎಂಬ ಪ್ರಿಯಾಬಾಯಿ ಮಾತುಗಳು, ಸುತ್ತಲೂ ಸೇರಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದವು.
ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ದೇಗುಲ ಪ್ರಸಾದ ಸೇವಿಸಿ ಅಸ್ಪಸ್ಥರಾಗಿದ್ದ ಮೈಲಿಬಾಯಿ (35) ಸೋಮವಾರ ಬೆಳಿಗ್ಗೆ ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಪುತ್ರಿ ಪ್ರಿಯಾಬಾಯಿ ಆಕ್ರಂದನ ಮುಗಿಲು ಮುಟ್ಟಿತು.
ಮರಣೋತ್ತರ ಪರೀಕ್ಷೆ ವೇಳೆ ಇವರ ದುಃಖದ ಕಟ್ಟೆಯೊಡೆದು ಸುತ್ತಮುತ್ತಲಿದ್ದವರು ಸಮಾಧಾನಪಡಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಇವರ ತಂದೆ ಕೃಷ್ಣಾನಾಯಕ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಸಾವು ಬದುಕಿನ ನಡುವೆ ತಾಯಿ ಹೋರಾಡುತ್ತಿದ್ದರು. ಇವರನ್ನು ನೋಡಿಕೊಳ್ಳಲು ಪುತ್ರಿ ಇಲ್ಲೇ ಇದ್ದರು. ಮತ್ತೊಬ್ಬ ಪುತ್ರಿ ರಾಣಿಬಾಯಿ, ಪುತ್ರ ರಾಜೇಶ್‌ನಾಯಕ ಸ್ವಗ್ರಾಮ ಮಾರ್ಟಳ್ಳಿ ಬಳಿಯ ಕೋಟೆಪದುವಿಗೆ ತೆರಳಿದ್ದರು. ಅಲ್ಲಿ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ತಾಯಿಯೂ ಮೃತಪಟ್ಟಿರುವುದು ಮಕ್ಕಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ರಾಣಿಬಾಯಿ ಇಲ್ಲಿನ ಮಹಾರಾಣಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರೆ, ಪ್ರಿಯಾಬಾಯಿ ಬಿಡದಿಯಲ್ಲಿ ಬಿಎಸ್ಸಿ ಓದುತ್ತಿದ್ದಾರೆ. ರಾಜೇಶ್‌ನಾಯಕ ಕೆ.ಎಂ.ದೊಡ್ಡಿಯಲ್ಲಿ ಪಿಯುಸಿ ಕಲಿಯುತ್ತಿದ್ದಾರೆ. ಈಗ ಈ ಮೂವರು ಎರಡೇ ದಿನದ ಅಂತರದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡಿದ್ದಾರೆ. ‘ಉಪವಾಸವಿದ್ದು ದೇಗುಲಕ್ಕೆ ಹೋಗಿ ಪ್ರಸಾದ ತಿಂದು ಬಂದಿದ್ದಕ್ಕೆ ಇಂತಹ ಘನಘೋರ ಶಿಕ್ಷೆ ಕೊಡ
ಬಾರದಿತ್ತು. ನಾವು ಮಾಡಿದ ತಪ್ಪಾದರೂ ಏನು’ ಎಂಬ ಅವರ ಪ್ರಶ್ನೆಗೆ ಯಾರಲ್ಲೂ ಉತ್ತರ ಇರಲಿಲ್ಲ.
ಮೂವರ ದತ್ತು ಸ್ವೀಕಾರಕ್ಕೆ ತೀರ್ಮಾನ
ಮೂಡುಬಿದಿರೆ: ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದಾಗಿ ಕೃಷ್ಣ ನಾಯ್ಕ್- ಮೈಲಿಬಾಯಿ ದಂಪತಿ ಸಾವಿಗಿಡಾಗಿದ್ದು, ಅವರ ಮೂವರು ಮಕ್ಕಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದತ್ತು ಪಡೆಯಲಿದೆ ಎಂದು ಆಳ್ವಾಸ್ ಸಂಸ್ಥೆ ಅಧ್ಯಕ್ಷ
ಡಾ.ಎಂ ಮೋಹನ ಆಳ್ವ ಸೋಮವಾರ ಮಾಧ್ಯಮಪ್ರತಿನಿಧಿಗಳಿಗೆ ತಿಳಿಸಿದರು.
ಮಕ್ಕಳ ಅಭಿಪ್ರಾಯ ಪಡೆದು ಮುಂದಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಂಗಳವಾರ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅವರು ಮೂವರು ಮಕ್ಕಳು ಹಾಗೂ ಅವರ ಸಂಬಂಧಿಕರನ್ನು ಭೇಟಿಮಾಡಲಿದ್ದಾರೆ. ಅವರಿಗೆ ₹1ಲಕ್ಷ ಆರ್ಥಿಕ ನೆರವು, ವಿದ್ಯಾಭ್ಯಾಸದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದರು.
ಹಿರಿಯ ಮಗಳು ರಾಣಿಬಾಯಿ ಬಿಎಸ್ಸಿ , 2ನೇ ಮಗಳು ಪ್ರಿಯಾಬಾಯಿ ಬಿಎಸ್ಸಿ ನರ್ಸಿಂಗ್ ಹಾಗೂ ಮಗ ರಾಜೇಶ್ ನಾಯ್ಕ್ ಪಿಯುಸಿ ವ್ಯಾಸಂಗವನ್ನುಆಳ್ವಾಸ್‌ನಲ್ಲಿಮುಂದುವರಿಸುವುದಾದರೆ ಅವರಿಗೆ ಪದವಿ, ಸ್ನಾತಕೋತ್ತರ ಶಿಕ್ಷಣ ಪಡೆಯಲು ಉಚಿತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಾಸ್ಟೆಲ್‌ನಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅವರಿಗೆ ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುತ್ತದೆ. ವ್ಯಾಸಂಗದ ಬಳಿಕ ಅವರಿಗೆ ಉದ್ಯೋಗ ಕಲ್ಪಿಸುವ ಜವಾಬ್ದಾರಿ ಕೂಡಾ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ್ದು ಎಂದು ಮೋಹನ ಆಳ್ವ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.