ADVERTISEMENT

ಪ್ರಸಾದಕ್ಕೆ ವಿಷ: ಸ್ವಾಮೀಜಿ ರೂಪಿಸಿದ್ದ ಸಂಚು, ನಾಲ್ವರ ಬಂಧನ

ದೇಗುಲದ ಹಣಕ್ಕಾಗಿ ಭಕ್ತರನ್ನೇ ಕೊಂದರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 5:14 IST
Last Updated 20 ಡಿಸೆಂಬರ್ 2018, 5:14 IST
ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ), ದೊಡ್ಡಯ್ಯ, ಮಾದೇಶ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ), ದೊಡ್ಡಯ್ಯ, ಮಾದೇಶ ಅವರನ್ನು ಪೊಲೀಸರು ಬಂಧಿಸಿದ್ದಾರೆ.   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ಸಂಭವಿಸಿದ್ದ ವಿಷ ಪ್ರಸಾದ ದುರಂತವನ್ನು ಪೊಲೀಸರು ಭೇದಿಸಿದ್ದಾರೆ. ದೇವಾಲಯದ ಆಡಳಿತ ನಿರ್ವಹಿಸುವಟ್ರಸ್ಟ್‌ ಅಧ್ಯಕ್ಷ ಹಾಗೂ ಮಹದೇಶ್ವರಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹಾದೇವಸ್ವಾಮಿ (52) ಅಲಿಯಾಸ್‌ ದೇವಣ್ಣ ಬುದ್ದಿ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ.

ದೇವಾಲಯದ ವ್ಯವಸ್ಥಾಪ‍ಕ ಮಾದೇಶ ಅಲಿಯಾಸ್‌ ಮಹದೇವಸ್ವಾಮಿ (46), ಪತ್ನಿ ಅಂಬಿಕಾ (35), ಸುಳ್ವಾಡಿ ಗ್ರಾಮದ ದೊಡ್ಡಯ್ಯ ತಂಬಡಿ (35) ಬಂಧಿತರು. ನಾಲ್ವರನ್ನು ಬುಧವಾರ ಕೊಳ್ಳೇಗಾಲದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀ
ಶರು 4 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ದೇವಾಲಯದ ಆಡಳಿತ ಟ್ರಸ್ಟ್‌ ರಚನೆಗೊಂಡ ನಂತರ ಮಹಾದೇವಸ್ವಾಮಿ ಹಣಕಾಸಿನ ವ್ಯವಹಾರದ ಮೇಲಿನ ಹಿಡಿತ ಕಳೆದುಕೊಂಡಿದ್ದರು. ತಮ್ಮ ವಿರೋಧದ ನಡುವೆಯೂ ದೇವಾಲಯದ ಗೋಪುರ ನಿರ್ಮಾಣಕ್ಕೆ ಮುಂದಾದ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಅಂಬಿಕಾ, ಮಾದೇಶ ಅವರನ್ನು ಬಳಸಿಕೊಂಡು ದೊಡ್ಡಯ್ಯ ಮೂಲಕ ಗುದ್ದಲಿಪೂಜೆಯ ದಿನ ತರಕಾರಿ ಬಾತ್‌ಗೆ ವಿಷ ಬೆರೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ADVERTISEMENT

ಬಂಧಿತರ ವಿರುದ್ಧ ಕೊಲೆ, ಕೊಲೆ ಯತ್ನ, ಬೇರೆಯವರ ಜೀವಕ್ಕೆ ಕುತ್ತು ತರುವುದು ಮತ್ತು ಒಳಸಂಚು ನಡೆಸಿದ ಪ್ರಕರಣ ದಾಖಲಿಸಲಾಗಿದೆ. ‘ಪೈಶಾಚಿಕ ಕೃತ್ಯ ಎಸಗಿರುವ ಬಗ್ಗೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೈಮನಸ್ಸಿಗೆ ತುಪ್ಪ ಸುರಿದಿದ್ದ ಗೋಪುರ ನಿರ್ಮಾಣ

‘ದೇವಾಲಯ ಟ್ರಸ್ಟ್‌ 2017ರ ಏಪ್ರಿಲ್‌ನಲ್ಲಿ ನೋಂದಣಿಯಾಗಿತ್ತು. ಅದಕ್ಕೂ ಮೊದಲು ಸಂಘದ ಹೆಸರಿನಲ್ಲಿ ಕಾರ್ಯನಿರ್ವಹಿಸುತಿತ್ತು. ಆಗಲೂ ಮಹಾದೇವಸ್ವಾಮಿ ಸಂಘದ ಉಸ್ತುವಾರಿಯಾಗಿದ್ದರು. ಆಗ ಹಣಕಾಸಿನ ನಿಯಂತ್ರಣ ಅವರ ಕೈಯಲ್ಲಿತ್ತು. ದೇವಾಲಯ ಅಭಿವೃದ್ಧಿ ದೃಷ್ಟಿಯಿಂದ ಟ್ರಸ್ಟ್‌ ರಚಿಸುವ ಬಗ್ಗೆ ಉಳಿದ 8 ಸದಸ್ಯರು ಪ್ರಸ್ತಾಪಿಸಿದ್ದರು. ಆದರೆ, ಇದನ್ನು ಮಹಾದೇವಸ್ವಾಮಿ ವಿರೋಧಿಸಿದ್ದರು. ಟ್ರಸ್ಟ್‌ ರಚನೆಯಾದ ನಂತರ ಚಿನ್ನಪ್ಪಿ ಹಾಗೂ‌ಅವರ ಬೆಂಬಲಿಗರ ಹಿಡಿತ ಹೆಚ್ಚುತ್ತಿರುವುದು ಮಹಾದೇವಸ್ವಾಮಿ ಹಾಗೂ ಅವರ ಹಿಂಬಾಲಕರಿಗೆ ಅತೃಪ್ತಿ ಉಂಟು ಮಾಡಿತ್ತು’ ಎಂದು ಅವರು ವಿವರಿಸಿದರು.

ಟ್ರಸ್ಟ್‌ನಲ್ಲಿ ಮಹಾದೇವಸ್ವಾಮಿ ಹಾಗೂ ಚಿನ್ನಪ್ಪಿ ಬಣಗಳ ನಡುವೆ ವೈಮನಸ್ಸು ತೀವ್ರವಾಗಿತ್ತು. ಇತ್ತೀಚೆಗೆ ದೇವಾಲಯಕ್ಕೆ ಗೋಪುರ ನಿರ್ಮಾಣ ಮಾಡುವ ವಿಚಾರ ಪ್ರಸ್ತಾಪವಾಗಿತ್ತು. ₹1.5 ಕೋಟಿ ವೆಚ್ಚದಲ್ಲಿ ಗೋಪುರವನ್ನು ತಮ್ಮ ನೇತೃತ್ವದಲ್ಲಿ ನಿರ್ಮಾಣ ಮಾಡಲು ಮಹಾದೇವಸ್ವಾಮಿ ಬಯಸಿದ್ದರು. ಆದರೆ, ಟ್ರಸ್ಟ್‌ನಲ್ಲಿ ಅಷ್ಟು ಹಣ ಇಲ್ಲದಿರುವುದರಿಂದ ₹75 ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆ ಉಳಿದ ಸದಸ್ಯರು ಪಟ್ಟು ಹಿಡಿದಿದ್ದರು.

‘ಮಹಾದೇವಸ್ವಾಮಿ ಒಪ್ಪಿಗೆ ಪಡೆಯದೆ ಡಿ. 14ರಂದು ಗೋಪುರ ನಿರ್ಮಾಣ ಮಾಡಲು ಚಿನ್ನಪ್ಪಿ ಹಾಗೂ ಟ್ರಸ್ಟ್‌ನ ಇತರ ಸದಸ್ಯರು ತೀರ್ಮಾನಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾಲೂರು ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ ಅವರನ್ನು
ಆಹ್ವಾನಿಸಿದ್ದು, ಬರಲು ಒಪ್ಪಿಕೊಂಡಿದ್ದರು. ಮಹಾದೇವಸ್ವಾಮಿ ಅವರನ್ನೂ ಕರೆದಿದ್ದರು. ಒಲ್ಲದ ಮನಸ್ಸಿನಿಂದಲೇ ಬರುವುದಾಗಿ ಹೇಳಿದ್ದರು. ಆದರೆ, ಭಾಗವಹಿಸಿರಲಿಲ್ಲ’ ಎಂದು ಹೇಳಿದರು.

ಅಂಬಿಕಾ, ಮಾದೇಶ‌ನೊಂದಿಗೆ ಸಂಚು

‘ಮಹಾದೇವಸ್ವಾಮಿ ಹಾಗೂ ಆರೋಪಿ ಅಂಬಿಕಾ ಹನೂರು ತಾಲ್ಲೂಕಿನ ಶಾಗ್ಯ ನಿವಾಸಿಗಳು. ಇಬ್ಬರ ನಡುವೆ ಅನೈತಿಕ ಸಂಬಂಧವೂ ಇದೆ. ಮಾದೇಶ ಆಕೆಯ ಗಂಡ. ಮಹಾದೇವಸ್ವಾಮಿ ಆಗಾಗ ಇವರ ಮನೆಗೆ ಬರುತ್ತಿದ್ದರು. ಇವರಿಗೆ ಮಾರ್ಟಳ್ಳಿಯಲ್ಲಿ ಭೋಗ್ಯಕ್ಕೆ ಮನೆ ಕೊಡಿಸಿದ್ದು, ಹಣಕಾಸಿನ ನೆರವನ್ನೂ ನೀಡುತ್ತಿದ್ದರು. 8 ವರ್ಷಗಳ ಹಿಂದೆ ಮಾದೇಶಗೆ ದೇವಾಲಯದಲ್ಲಿ ವ್ಯವಸ್ಥಾಪಕರ ಕೆಲಸವನ್ನೂ ಕೊಡಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಚಿನ್ನಪ್ಪಿ ಹಾಗೂ ಇತರ ಸದಸ್ಯರು ಗೋಪುರ ನಿರ್ಮಾಣಕ್ಕೆ ಗುದ್ದಲಿ ಪೂಜೆಗೆ ದಿನ ನಿಗದಿ ಪಡಿಸಿದ ನಂತರ, ಆ ಬಣದವರನ್ನು ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಹೋಗುವಂತೆ ಮಾಡಲು ಮೂವರೂ ಸೇರಿ ಸಂಚು ರೂಪಿಸಿದ್ದರು. ಪ್ರಸಾದದಲ್ಲಿ ವಿಷ ಬೆರೆ
ಸಲು ಯೋಜನೆ ಸಿದ್ಧಪಡಿಸಿದರು. ಅದಕ್ಕಾಗಿ ಅಂಬಿಕಾ, ಕೃಷಿ ಅಧಿಕಾರಿಯಾಗಿರುವ ತಮ್ಮ ಸಂಬಂಧಿಯ ಮೂಲಕ ಕಾರ್ಯಕ್ರಮಕ್ಕೂ 8–10 ದಿನಗಳ ಹಿಂದೆ ಎರಡು ಬಾಟಲಿ ಕ್ರಿಮಿನಾಶಕ ತರಿಸಿದ್ದರು’ ಎಂದು ತಿಳಿಸಿದರು.

ಭಟ್ಟರನ್ನು ಕಳುಹಿಸಿ ವಿಷ ಬೆರೆಸಿದರು

ದೊಡ್ಡಯ್ಯಗೆ ಅರ್ಧ ಲೀಟರ್‌ನ ಒಂದು ಬಾಟಲಿ ಕ್ರಿಮಿನಾಶಕವನ್ನು ಅಂಬಿಕಾ ಕೊಟ್ಟಿದ್ದರು. ಮಾದೇಶ, ದೊಡ್ಡಯ್ಯ ಜಂಟಿಯಾಗಿ ಪ್ರಸಾದಕ್ಕೆ ವಿಷ ಬೆರೆಸಿದ್ದರು.

‘ಗುದ್ದಲಿ ಪೂಜೆ ಕಾರ್ಯಕ್ರಮದಂದು ಈರಣ್ಣ, ಲೋಕೇಶ್‌, ಪುಟ್ಟಸ್ವಾಮಿ ಪ್ರಸಾದ ತಯಾರಿಸುತ್ತಿದ್ದರು. ಪ್ರಸಾದ ತಯಾರಿಕೆ ಅಂತಿಮ ಹಂತದಲ್ಲಿದ್ದಾಗ ಲೋಕೇಶ್‌ ಸ್ನಾನಕ್ಕಾಗಿ ಹೊರಗಡೆ ಹೋಗಿದ್ದಾರೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ಮಾದೇಶ, ದೊಡ್ಡಯ್ಯ ಅವರು, ಭಕ್ತಾದಿಗಳಿಗೆ ಪ್ರಸಾದ ವಿತರಿಸಲು ತಟ್ಟೆ, ನೀರಿನ ವ್ಯವಸ್ಥೆ ಮಾಡುವಂತೆ ಈರಣ್ಣ, ಪುಟ್ಟಸ್ವಾಮಿ ಅವರಿಗೆ ಸೂಚಿಸುತ್ತಾರೆ. ಅದರಂತೆ ಅವರು ಹೊರಗಡೆ ಹೋದಾಗ ದೊಡ್ಡಯ್ಯ ವಿಷ ಬೆರೆಸಿದ್ದಾರೆ.

‘ನಂತರ ವಾಪಸ್‌ ಬಂದ ಈರಣ್ಣ ಅವರು ಪ್ರಸಾದ ಕಮಟು ವಾಸನೆ ಬರುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಅದು ಪಚ್ಚೆ ಕರ್ಪೂರದ ವಾಸನೆ ಆಗಿರಬಹುದು ಎಂದು ಮಾದೇಶ ಸಮಜಾಯಿಷಿ ನೀಡಿದ್ದಾರೆ. ಭಕ್ತರು ಸಹ ಪ್ರಸಾದ ಸೇವಿಸುವಾಗ ಇದೇ ಪ್ರಶ್ನೆ ಮುಂದಿಟ್ಟಾಗ, ಪಚ್ಚೆ ಕರ್ಪೂರ ಹೆಚ್ಚಾಗಿರುವುದರಿಂದ ಈ ರೀತಿ ಆಗಿರಬಹುದು’ ಎಂದು ನಂಬಿಸಿದ್ದರು.

ಪ್ರಸಾದ ಸೇವಿಸದ ಟ್ರಸ್ಟಿಗಳು

ಮಹಾದೇವಸ್ವಾಮಿ ಬಿಟ್ಟು ಉಳಿದ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಸ್ಟ್‌ ಮುಖಂಡರು ಮನೆಯಿಂದ ತಂದಿದ್ದ ಇಡ್ಲಿ, ಪೊಂಗಲ್‌ ಹಂಚಿಕೊಂಡು ತಿಂದಿದ್ದರು. ಹಾಗಾಗಿ, ಪ‍್ರಸಾದ ಸೇವಿಸಿರಲಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀಗಳಾದ ಗುರುಸ್ವಾಮಿ ಹೊರಗಡೆ ಆಹಾರ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಪ್ರಸಾದ ಸೇವಿಸಿರಲಿಲ್ಲ.

₹12 ಲಕ್ಷ ಆದಾಯ

ಸುಳ್ವಾಡಿ ಮಾರಮ್ಮ ದೇವಾಲಯಕ್ಕೆ ವಾರ್ಷಿಕ ₹12 ಲಕ್ಷ ಆದಾಯ ಇದೆ. ಟ್ರಸ್ಟ್‌ ಖಾತೆಯಲ್ಲಿ ₹38–40 ಲಕ್ಷ ಹಣವಿದೆ ಎಂದು ಐಜಿಪಿ ಶರತ್‌ ಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.