ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಶುಕ್ರವಾರ ಬಿಜೆಪಿಗೆ ಅಧಿಕೃತವಾಗಿ ಸೇರಲಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಸುಮಲತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಬುಧವಾರ ಮಂಡ್ಯದಲ್ಲಿ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಸೇರುವ ತೀರ್ಮಾನವನ್ನು ಅವರು ಪ್ರಕಟಿಸಿದ್ದರು.
‘ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿಸಿಕೊಂಡಿದ್ದೇನೆ. ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. ಅದರಂತೆ ಬಿಜೆಪಿ ನಾಯಕರ ಸಮ್ಮುಖದಲ್ಲಿ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬಿಜೆಪಿ ಸೇರುತ್ತಿದ್ದೇನೆ. ನಮ್ಮ ಕರುನಾಡಿನ ಸಕ್ಕರೆಯ ನಾಡು ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳ, ಡಾ.ಅಂಬರೀಶ್ ಅವರ ಅಭಿಮಾನಿಗಳ ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ’ ಎಂದು ಸುಮಲತಾ ಮನವಿ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಬಳಿಕ ಅವರು ಬಿಜೆಪಿಯನ್ನು ಬೆಂಬಲಿಸಿದ್ದರು. ಈ ಬಾರಿ ಅವರು ಬಿಜೆಪಿ ಟಿಕೆಟ್‌ನಿಂದ ಮಂಡ್ಯದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಜೆಡಿಎಸ್ ಎನ್‌ಡಿಎ ಮೈತ್ರಿ ಕೂಟ ಸೇರಿದ್ದರಿಂದ ಬಿಜೆಪಿಯು ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತು. ಈ ಮಧ್ಯೆ ಬೆಂಬಲಿಗರ ಸಭೆ ನಡೆಸಿ ತಾವು ಪಕ್ಷೇತರರಾಗಿ ಸ್ಪರ್ಧಿಸುವುದಿಲ್ಲ. ಆದರೆ, ಮಂಡ್ಯ ಜಿಲ್ಲೆ ಬಿಟ್ಟು ಬೇರೆ ಕಡೆಯಿಂದ ರಾಜಕೀಯ ಇಚ್ಛೆಯೂ ಇಲ್ಲ ಎಂದು ಹೇಳಿದ್ದರು.
ಬೂತ್ ಅಧ್ಯಕ್ಷರೊಂದಿಗೆ ಮೋದಿ ಸಂವಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ 4.30ಕ್ಕೆ ಕರ್ನಾಟಕದ ಬಿಜೆಪಿಯ ಎಲ್ಲ ಬೂತ್ ಅಧ್ಯಕ್ಷರ ಜತೆ ಸಂವಾದ ನಡೆಸಲಿದ್ದಾರೆ. ಪ್ರತಿ ದಿನವೂ ಬೇರೆ ಬೇರೆ ರಾಜ್ಯಗಳ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಸಂಜೆ ಸಂವಾದ ನಡೆಸಿ ಅವರನ್ನು ಚುನಾವಣೆಗೆ ಅಣಿಗೊಳಿಸುವ ಕಾರ್ಯದಲ್ಲಿ ಮೋದಿ ತೊಡಗಿದ್ದಾರೆ. ‘ಮೇರಾ ಬೂತ್ ಸಬ್ ಸೆ ಮಜಬೂತ್’ ಹೆಸರಿನಲ್ಲಿ ಸಂವಾದವನ್ನು ‘ನಮೋ ಆ್ಯಪ್’ ಮೂಲಕ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.