ಮಂಡ್ಯ: ನನಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಮಂಡ್ಯ ಜಿಲ್ಲೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಗರ ನಿವಾಸದಲ್ಲಿ ತಮ್ಮ ಚುನಾವಣಾ ಏಜೆಂಟ್ ಮದನ್ ಕುಮಾರ್ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
‘ಮಾರ್ಚ್ 20ರಂದು ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ.ಅಂದಿನಿಂದ ಇಂದಿನವರೆಗೆ ನಡೆದ ಘಟನೆಗಳಿಂದ ನನಗೆ ನ್ಯಾಯ ಸಿಗುತ್ತಿಲ್ಲ ಎಂಬುದರ ಬಗ್ಗೆ ನಾನು ಮಾತನಾಡುತ್ತೇನೆ. ಅಂದು ಮೆರವಣಿಗೆ ನಡೆದ ದಿನ ಜಿಲ್ಲೆಯ ಬಹುತೇಕ ಕಡೆ ಕರೆಂಟ್ ಕಟ್ ಮಾಡಿಸಿದ್ದರು. ಅದನ್ನು ಯಾರು ಮಾಡಿದ್ದಾರೆ ಎಂಬುದನ್ನು ಜನಕ್ಕೆ ಬಿಡುತ್ತೇನೆ. ನಂತರ ಮಾರ್ಚ್ 25ರಂದು ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ದಿನ ಯಾವುದೇ ಕಾರಣಕ್ಕೂ ಕರೆಂಟ್ ಕಡಿತಗೊಳಿಸಬಾರದು ಎಂದು ಎಸ್ಪಿ ಮೂಲಕ ಅಧಿಕೃತ ಪತ್ರ ಕಳುಹಿಸಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಪ್ರಚಾರ ಮಾಡುವಾಗ ಕರೆಂಟ್ ಕಟ್ ಮಾಡುತ್ತಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಪ್ರಚಾರ ಮಾಡುವಾಗ ಯಾವುದೇ ಕಾರಣಕ್ಕೂ ಕರೆಂಟ್ ಕಟ್ ಮಾಡಬಾರದು ಎಂದು ಆದೇಶಿಸುತ್ತಾರೆ.ಅಧಿಕಾರಿಗಳು ತಮ್ಮಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ನಾನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಇದು ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾಗಿ ಸುಮಲತಾ ತಿಳಿಸಿದರು.
ಇದೇ ವೇಳೆ ಮಾತನಾಡಿದ ಮದನ್, ‘ನಿಖಿಲ್ ನಾಮಪತ್ರ ಪರಿಶೀಲನೆ ವೇಳೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವು. ಈ ಕುರಿತು ಲಿಖಿತ ದೂರು ಸಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಸೂಚಿಸಿದ್ದರು. ಆದರಂತೆ ನಾನುಅರ್ಜಿ ಬರೆದು ಕೊಟ್ಟಿದ್ದೆ. ಆದರೂ ಕೂಡ ಯಾವುದೇ ಆಕ್ಷೇಪ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿಗಳುಹಿಂಬರಹ ಕೊಟ್ಟಿದ್ದಾರೆ‘ ಎಂದು ಆರೋಪಿಸಿದರು.
26ರಂದು ನಡೆದ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಕುರಿತಾದ ನಕಲಿವಿಡಿಯೊ ತುಣುಕನ್ನು ನೀಡುವಂತೆ ಕೇಳಿದ್ದೆ. ಆದರೆ ವಿಡಿಯೊ ಚಿತ್ರೀಕರಿಸಿದ್ದ ಛಾಯಾಗ್ರಾಹಕ ಒಂದೂವರೆ ನಿಮಿಷದ ವಿಡಿಯೊವನ್ನು ಕಟ್ ಮಾಡಿದ್ದಾನೆ. ಜತೆಗೆ, ವಿಡಿಯೊ ಇದ್ದ ಕ್ಯಾಮರಾವನ್ನು ಮದುವೆ ಸಮಾರಂಭಕ್ಕೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿರುವುದಾಗಿ ಮದನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.