ADVERTISEMENT

ಬರ: ಬೇಸಿಗೆ ರಜೆಯಲ್ಲೂ ಬಿಸಿಯೂಟ, 223 ಬರಪೀಡಿತ ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ

ಅನಿತಾ ಎಚ್.
Published 8 ಏಪ್ರಿಲ್ 2024, 0:30 IST
Last Updated 8 ಏಪ್ರಿಲ್ 2024, 0:30 IST
ದಾವಣಗೆರೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುತ್ತಿರುವ ಸಾಂದರ್ಭಿಕ ಚಿತ್ರ
ದಾವಣಗೆರೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುತ್ತಿರುವ ಸಾಂದರ್ಭಿಕ ಚಿತ್ರ   

ದಾವಣಗೆರೆ: ತೀವ್ರ ಬರ ಆವರಿಸಿರುವುದರಿಂದ ಪ್ರಸಕ್ತ ಬೇಸಿಗೆ ರಜೆ ವೇಳೆ 41 ದಿನ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ರಾಜ್ಯದ 223 ತಾಲ್ಲೂಕುಗಳಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಏಪ್ರಿಲ್ 11ರಿಂದ ಮೇ 28ರವರೆಗೆ  ಭಾನುವಾರ ಹೊರತುಪಡಿಸಿ ಮಿಕ್ಕೆಲ್ಲ ದಿನ ವಿದ್ಯಾರ್ಥಿಗಳಿಗೆ ನಿತ್ಯ ಮಧ್ಯಾಹ್ನ 12.30ರಿಂದ 2ರವರೆಗೆ ಬಿಸಿಯೂಟ ದೊರೆಯಲಿದೆ. ಉಷ್ಣಾಂಶ ಹೆಚ್ಚಿರುವ ಬೀದರ್‌, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ಬೆಳಿಗ್ಗೆ 10ರಿಂದ 11.30ರವರೆಗೆ ಬಿಸಿಯೂಟ ವಿತರಿಸುವಂತೆ ಸೂಚಿಸಲಾಗಿದೆ.

ಗ್ರಾಮವೊಂದರಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯನ್ನು ಬಿಸಿಯೂಟ ಪೂರೈಕೆ ಕೇಂದ್ರವಾಗಿ ಗುರುತಿಸಿದ್ದು, ಸುತ್ತಲಿನ 1–2 ಕಿ.ಮೀ ವ್ಯಾಪ್ತಿಯೊಳಗಿನ ಕಿರಿಯ ಪ್ರಾಥಮಿಕ, ಹಿರಿಯ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ಕೇಂದ್ರಕ್ಕೆ ಊಟಕ್ಕೆ ಬರಬೇಕಿದೆ.

ADVERTISEMENT

ಬಿಸಿಯೂಟ ಸೇವಿಸಲು ಇಚ್ಛಿಸುವ ವಿದ್ಯಾರ್ಥಿಗಳು ಒಪ್ಪಿಗೆ ಪತ್ರಕ್ಕೆ ಪಾಲಕರಿಂದ ಸಹಿ ಹಾಕಿಸಿ ನೀಡುವುದು ಕಡ್ಡಾಯ. ಕೂಲಿ ಅರಸಿ ಹೊರ ಜಿಲ್ಲೆಗಳಿಗೆ ಹೋಗುವವರ ಮಕ್ಕಳು ಹಾಗೂ ರಜೆ ಕಳೆಯಲು ಅಜ್ಜ–ಅಜ್ಜಿ ಮನೆಗೆ ತೆರಳುವ ಮಕ್ಕಳು ಆಯಾ ಗ್ರಾಮಗಳಲ್ಲಿನ ಶಾಲೆಗಳಲ್ಲೇ ಬಿಸಿಯೂಟ ಸೇವಿಸಲು ಅವಕಾಶವಿದೆ. ಈ ಅವಧಿಯಲ್ಲಿ ಕೆಲಸ ಮಾಡುವ ಶಿಕ್ಷಕರು ಗಳಿಕೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

‘ಬರದಿಂದಾಗಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಕ್ರಮ ವಹಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ, ಬಿಸಿಯೂಟ ವಿತರಣೆಗೆ ಕೇಂದ್ರ ಶಾಲೆಗಳನ್ನು ಗುರುತಿಸಿರುವುದು ಸರಿಯಲ್ಲ. ಸಣ್ಣ ಮಕ್ಕಳು ಸುಡು ಬಿಸಿಲಿನಲ್ಲಿ 1–2 ಕಿ.ಮೀ ದೂರದಿಂದ ಕೇಂದ್ರ ಶಾಲೆಗೆ ಬರಬೇಕೆಂದರೆ ಕಷ್ಟವಾಗುತ್ತದೆ’ ಎಂದು ಎಸ್‌ಡಿಎಂಸಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕ್ಳ ಆಂಜನೇಯ ಹೇಳಿದರು.

‘ರಜಾ ದಿನಗಳಲ್ಲಿ ಅನುಕೂಲ ಇರುವವರ ಮಕ್ಕಳು ಬೇಸಿಗೆ ಶಿಬಿರಗಳಿಗೆ ತೆರಳುತ್ತಾರೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಜತೆಗೆ ಚಿತ್ರಕಲೆ, ಹಾಡು, ನೃತ್ಯ ಮತ್ತಿತರ ಪಠ್ಯೇತರ ಚಟುವಟಿಕೆ ಆಯೋಜಿಸಬೇಕು’ ಎಂದು ಅವರು ಮನವಿ ಮಾಡಿದರು.

ದಾನಿಗಳಿಂದಲೂ ಸಹಾಯಹಸ್ತ

ಸರ್ಕಾರದ ಈ ಮಹತ್ವದ ಯೋಜನೆಗೆ ನೆರವು ನೀಡಲು ಜಿಲ್ಲೆಯ ಕೆಲ ದಾನಿಗಳು ಮುಂದಾಗಿದ್ದಾರೆ. ದಾವಣಗೆರೆಯ ನಿಟುವಳ್ಳಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಹ ಶಿಕ್ಷಕ ಕೆ.ಟಿ.ಜಯಪ್ಪ ಅವರು ತೋರಿದ ವಿಶೇಷ ಮುತುವರ್ಜಿಯಿಂದಾಗಿ ಉದ್ಯಮಿ ಕೆ.ಚಂದ್ರಪ್ಪ ಅವರು ಷರಬತ್ತು ಮಜ್ಜಿಗೆ ಪೂರೈಸಲಿದ್ದಾರೆ. ಪಾಲಿಕೆ ಮಾಜಿ ನಾಮನಿರ್ದೇಶಿತ ಸದಸ್ಯೆ ಸವಿತಾ ಹುಲ್ಲುಮನಿ ಮಾಜಿ ಮೇಯರ್‌ ಉಮಾ ಪ್ರಕಾಶ್‌ ಅವರು ವಾರದಲ್ಲಿ ಒಂದು ದಿನ ಸಿಹಿ ವಿತರಿಸಲಿದ್ದಾರೆ. ‘ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10.30ಕ್ಕೆ ಬರಲು ಸೂಚಿಸಲಾಗಿದೆ. ಊಟ ಸಿದ್ಧವಾಗುವವರೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಸಹ ಶಿಕ್ಷಕ ಕೆ.ಟಿ.ಜಯಪ್ಪ ತಿಳಿಸಿದರು.

ಸರ್ಕಾರದ ಯೋಜನೆಗೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಮಕ್ಕಳು ಒಪ್ಪಿಗೆ ಪತ್ರ ನೀಡಿದ್ದಾರೆ.
–ದುರುಗಪ್ಪ ಡಿ ಶಿಕ್ಷಣ ಅಧಿಕಾರಿ ಪಿಎಂ ಪೋಷಣ್‌ (ಮಧ್ಯಾಹ್ನ ಉಪಾಹಾರ ಯೋಜನೆ) ದಾವಣಗೆರೆ
ಅಡುಗೆಕೋಣೆ ತಟ್ಟೆ ಲೋಟ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಸ್ಥಳೀಯ ಆಡಳಿತದ ನೆರವು ಪಡೆಯಲು ಸೂಚಿಸಲಾಗಿದೆ.
–ಜಿ.ಕೊಟ್ರೇಶ್‌ ಡಿಡಿಪಿಐ ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.