ADVERTISEMENT

ಮುಖ್ಯ ಕಾರ್ಯದರ್ಶಿಗೆ ಸಮನ್ಸ್‌: ರಾಜ್ಯಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:58 IST
Last Updated 26 ಅಕ್ಟೋಬರ್ 2024, 15:58 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಕ್ರಿಮಿನಲ್‌ ಪ್ರಕರಣವೊಂದರಲ್ಲಿ ರಾಜ್ಯ ವಕೀಲರಿಗೆ ತಪ್ಪು ಸೂಚನೆ ನೀಡಿದ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಿ ವಕೀಲರು ಸೂಕ್ತ ಸಹಕಾರ ನೀಡದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸಮನ್ಸ್‌ ನೀಡಲಾಗುವುದು ಎಂದು ಎಚ್ಚರಿಸಿದೆ. 

ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ವಿನಾಯಕ್‌ ಯಾನೆ ವಿನಯ್‌ ಗೌಡ ಮರಿಗೌಡ ಎಂಬುವರ ವಿರುದ್ಧ ಗೋಕಾಕ ನಗರ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ವಿನಾಯಕ್ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆರೋಪಿಗೆ ಮೂರು ತಿಂಗಳ ಮಧ್ಯಂತರ ಜಾಮೀನನ್ನು ಆಗಸ್ಟ್‌ 30ರಂದು ಮಂಜೂರು ಮಾಡಲಾಗಿತ್ತು. 

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ, ‘ರಾಜ್ಯದ ಕಡೆಯಿಂದ ಇಂತಹ ಲೋ‍ಪ ನಡೆಯುತ್ತಿರುವುದು ಇದೇ ಮೊದಲಲ್ಲ. ಅತ್ಯಂತ ಸರಿ‍ಪಡಿಸಲಾಗದ ರಾಜ್ಯ’ ಎಂದು ತರಾಟೆಗೆ ತೆಗೆದುಕೊಂಡಿತು. 

ಇದಕ್ಕೂ ಮುನ್ನ ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್‌ ಕಾಮತ್‌, ‘ಆರೋಪಿ ವಿರುದ್ಧ ಆರೋಪ ಹೊರಿಸಲಾಗಿಲ್ಲ ಎಂದು ಹಿಂದಿನ ಆದೇಶದಲ್ಲಿ ತಪ್ಪಾಗಿ ದಾಖಲಿಸಲಾಗಿದೆ. ಸರ್ಕಾರದಿಂದ ಅಚಾತುರ್ಯ ಆಗಿದೆ’ ಎಂದರು.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ವಕೀಲರು, ‘ಅರ್ಜಿದಾರರು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ 21 ಆರೋಪಿಗಳು ಒಂದರ ನಂತರ ಒಂದರಂತೆ ವಿವಿಧ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆರೋಪಿಗಳ ಮೇಲೆ ವಿಚಾರಣಾ ನ್ಯಾಯಾಲಯವು ಈವರೆಗೆ ಆರೋಪ ಹೊರಿಸಿಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು. 

ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ವಕೀಲರು, ‘ಆರೋಪಿಗಳ ವಿರುದ್ಧ ಆರೋಪ ಹೊರಿಸಲಾಗಿದೆ’ ಎಂದು ತಿಳಿಸಿದರು. ಆಗ ನ್ಯಾಯಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.