ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿದ್ದಾರೆ.
ಲೋಕಾಯುಕ್ತದ ಅಧಿಕಾರಿಗಳು ಶನಿವಾರ ಜಮೀರ್ ಅವರಿಗೆ ಸಮನ್ಸ್ ನೀಡಿದ್ದು, ಡಿಸೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನೀಡಿದ ಹೇಳಿಕೆ ಸಂಬಂಧ ಜಮೀರ್ ಅವರು ತೀವ್ರ ಟೀಕೆಗೆ ಗುರಿಯಾಗಿರುವ ಹೊತ್ತಿನಲ್ಲೇ ಈ ಸಮನ್ಸ್ ಜಾರಿಯಾಗಿದೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪು, ‘ರಾಜಕೀಯ ಪ್ರೇರಿತವಾದುದು’ ಎಂದು ಅವರು ನೀಡಿದ್ದ ಹೇಳಿಕೆ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಅಡ್ವೊಕೇಟ್ ಜನರಲ್ ಅವರಿಗೆ ರಾಜ್ಯಪಾಲರು ಹಿಂದಿನ ವಾರವಷ್ಟೇ ಸೂಚನೆ ನೀಡಿದ್ದರು.
ಪ್ರಕರಣದ ವಿವರ: ಐಎಂಎ ಚಿಟ್‌ಫಂಡ್ ವಂಚನೆ ಪ್ರಕರಣದ ತನಿಖೆ ವೇಳೆ, ಐಎಂಎ ಮತ್ತು ಜಮೀರ್ ಅಹಮದ್ ಅವರ ನಡುವೆ ಹಣಕಾಸು ವ್ಯವಹಾರ ನಡೆದಿರುವುದನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಪತ್ತೆ ಮಾಡಿತ್ತು. ಹೆಚ್ಚಿನ ತನಿಖೆಗಾಗಿ ಜಮೀರ್ ಅವರಿಗೆ ಸೇರಿದ ಜಾಗಗಳ ಮೇಲೆ ಇ.ಡಿ ಅಧಿಕಾರಿಗಳು 2021ರ ಆಗಸ್ಟ್‌ನಲ್ಲಿ ದಾಳಿ ನಡೆಸಿದ್ದರು.
ಚಿಟ್‌ಫಂಡ್ ವಂಚನೆಗೆ ಸಂಬಂಧಿಸಿದಂತೆ ದಾಳಿ ಸಂದರ್ಭದಲ್ಲಿ ಯಾವ ದಾಖಲೆಗಳೂ ಪತ್ತೆಯಾಗಿರಲಿಲ್ಲ. ಆದರೆ ಜಮೀರ್ ಅವರು ತಮ್ಮ ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿರುವುದು ಪತ್ತೆಯಾಗಿತ್ತು. ಈ ಸಂಬಂಧ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇ.ಡಿ ವಿವರಣಾತ್ಮಕವಾದ ವರದಿಯನ್ನು ನೀಡಿತ್ತು. ಜತೆಗೆ ತನಿಖೆಯ ಅಗತ್ಯವಿದೆ ಎಂದು ಹೇಳಿತ್ತು.
2022ರ ಸೆಪ್ಟೆಂಬರ್‌ನಲ್ಲಿ ಎಸಿಬಿ ರದ್ದಾದ ಕಾರಣ, ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದವು. ಆನಂತರ ಜಮೀರ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣನೀಯ ಮಟ್ಟದ ತನಿಖೆ ನಡೆದಿರಲಿಲ್ಲ. ಆದರೆ, ಈಗ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.