ಬೆಂಗಳೂರು: ‘ಅಗತ್ಯ ಇರುವ ಇಲಾಖೆಗಳಿಗೆ ಕಾರ್ಮಿಕರ ವಿವಿಧೋದ್ದೇಶ ಸೊಸೈಟಿಗಳ ಮೂಲಕ ಹೊರಗುತ್ತಿಗೆ ನೌಕರರನ್ನು ಪೂರೈಸಲು ಅನುಮತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸಚಿವ ಸಂಪುಟ ಸಭೆಯ ಒಪ್ಪಿಗೆ ಬಳಿಕ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಕೆ.ಎಸ್. ಬಸವಂತಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬೀದರ್ ಜಿಲ್ಲೆಯಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ. ಅದೇ ಮಾದರಿಯನ್ನು ಎಲ್ಲ ಕಡೆ ಅನುಸರಿಸುವ ಚಿಂತನೆಯಿದೆ’ ಎಂದರು.
‘20ಕ್ಕಿಂತ ಹೆಚ್ಚು ಹೊರ ಗುತ್ತಿಗೆ ನೌಕರರನ್ನು ನಿಯೋಜಿಸುವ ಗುತ್ತಿಗೆದಾರರಿಗೆ, ‘ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿಷೇಧ) ಕಾಯ್ದೆ’ ಅನ್ವಯವಾಗಲಿದ್ದು, ಪರವಾನಗಿ ಪಡೆಯಬೇಕು. ಈಗಾಗಲೇ 405 ಗುತ್ತಿಗೆದಾರರು ಅನುಮತಿ ಪಡೆದುಕೊಂಡಿದ್ದಾರೆ. ಈ ಗುತ್ತಿಗೆದಾರರು ಪರವಾನಗಿ ಪಡೆಯುವ ಸಂದರ್ಭದಲ್ಲಿ ನಮೂದಿಸಿದ ಪ್ರಕಾರ ಒಟ್ಟು 54,995 ಗುತ್ತಿಗೆ, ಹೊರಗುತ್ತಿಗೆ ನೌಕರರಿದ್ದಾರೆ’ ಎಂದು ಲಾಡ್ ವಿವರಿಸಿದರು.
‘ಗುತ್ತಿಗೆದಾರರು ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಕಾಯ್ದೆಯ ಅನ್ವಯ ವೇತನ ನೀಡುತ್ತಿಲ್ಲ. ಮೋಸ ಮಾಡುತ್ತಿದ್ದಾರೆ’ ಎಂದು ಬಸವಂತಪ್ಪ ದೂರಿದರು. ಅದಕ್ಕೆ ಲಾಡ್, ‘ಕನಿಷ್ಠ ವೇತನ ಪಾವತಿಸದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಕನಿಷ್ಠ ವೇತನ ಪ್ರಾಧಿಕಾರಿಗಳಾದ ಉಪ ಕಾರ್ಮಿಕ ಆಯುಕ್ತರು ಮತ್ತು ಸಹಾಯಕ ಕಾರ್ಮಿಕ ಆಯುಕ್ತರ ಮುಂದೆ ನೌಕರರು ಕ್ಲೈಮ್ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.