ಮೈಸೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿ ಖರೀದಿಸಿರುವ ಸರ್ಕಾರವು, ಏ. 2ರ ಬಳಿಕ ರೈತರಿಗೆ ಹಣ ಪಾವತಿಸಿಲ್ಲ.
ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು, ಹಣ ಬಾರದೆ ವ್ಯವಸಾಯ ಮಾಡಲು ಪರದಾಡುತ್ತಿದ್ದಾರೆ. ಕೆಲವರು ಮತ್ತೆ ಕೈಸಾಲಕ್ಕೆ ಮೊರೆ ಹೋಗಿದ್ದಾರೆ.
ಬೆಂಬಲ ಬೆಲೆ ₹ 1,815 ದರದಲ್ಲಿ, ನೋಂದಾಯಿತ ಪ್ರತಿ ರೈತನಿಂದ ಗರಿಷ್ಠ 40 ಕ್ವಿಂಟಲ್ ಭತ್ತವನ್ನು ಹಾಗೂ ₹ 3,150 ದರದಲ್ಲಿ ಪ್ರತಿ ರೈತನಿಂದ ಗರಿಷ್ಠ 75 ಕ್ವಿಂಟಲ್ ರಾಗಿಯನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮೂಲಕ ಖರೀದಿಸಲಾಗಿದೆ.
ಬಾಕಿ: ರಾಗಿ ಮಾರಾಟ ಮಾಡಿರುವ 3,229 ರೈತರಿಗೆ ₹ 25.27 ಕೋಟಿ ನೀಡಬೇಕಿದೆ. ಭತ್ತ ಮಾರಾಟ ಮಾಡಿರುವ 533 ರೈತರಿಗೆ ₹ 2.35 ಕೋಟಿ ಪಾವತಿಸಬೇಕಿದೆ. ಲಾಕ್‌ಡೌನ್‌ಗೆ ಮುನ್ನ ಮಾರಾಟ ಮಾಡಿದ್ದ ಕೆಲ ರೈತರ ಖಾತೆಗಳಿಗೆ ಅರ್ಧದಷ್ಟು ಹಣ ಮಾತ್ರ ತಲುಪಿದೆ.
ವ್ಯವಸಾಯಕ್ಕೆ ಕಷ್ಟ: ‘ಮತ್ತೊಂದು ಭತ್ತದ ಬೆಳೆ ಕಟಾವಿಗೆ ಬಂದಿದೆ. ಹೆಚ್ಚಿನವರು ಸಾಲ ಮಾಡಿ ಭತ್ತ ಬೆಳೆದಿದ್ದಾರೆ. ಮತ್ತೆ ವ್ಯವಸಾಯ ಮಾಡಲು ಹಣವಿಲ್ಲದಾಗಿದೆ’ ಎಂದು ಮೈಸೂರು ತಾಲ್ಲೂಕಿನ ರೈತ ಕೃಷ್ಣರಾಜು ಸಮಸ್ಯೆ ಹೇಳಿಕೊಂಡರು.
‘ಏ. 2ರವರೆಗೆ ಭತ್ತ ಹಾಗೂ ರಾಗಿ ಮಾರಾಟ ಮಾಡಿದ ರೈತರ ಖಾತೆಗಳಿಗೆ ಹಣ ಪಾವತಿಸಲಾಗಿದೆ. ಆನಂತರ ಮಾರಾಟ ಮಾಡಿದವರಿಗೆ ಮಾತ್ರ ಹಣ ನೀಡಬೇಕಿದೆ’ ಎಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದಮಹಾದೇವಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಫೆಬ್ರುವರಿಯಿಂದ ಮೇ 31ರವರೆಗೆ ಒಟ್ಟು 8,474 ರೈತರಿಂದ 2.9 ಲಕ್ಷ ಕ್ವಿಂಟಲ್ ರಾಗಿ, ಒಟ್ಟು 8,056 ರೈತರಿಂದ 1.95 ಲಕ್ಷ ಕ್ವಿಂಟಲ್ ಭತ್ತ ಖರೀದಿ ಮಾಡಲಾಗಿದೆ.
*
ನಾನು ಫೆಬ್ರುವರಿಯಲ್ಲೇ ಭತ್ತ ಮಾರಿದ್ದೆ. ಏಳು ದಿನಗಳಲ್ಲಿ ಹಣ ಪಾವತಿಸುವುದಾಗಿ ಹೇಳಿದ್ದರು. ಆದರೆ, ಇನ್ನೂ ಪೂರ್ಣ ಹಣ ಬಂದಿಲ್ಲ.
-ರಾಮಪ್ರಸಾದ್ ಭತ್ತ ಬೆಳೆಗಾರ, ಕೆ.ಆರ್.ನಗರ
*
ಹಣಕ್ಕಾಗಿ ಒತ್ತಾಯಿಸುತ್ತಿರುವ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಒಂದೆರಡು ವಾರಗಳಲ್ಲಿ ರೈತರ ಖಾತೆಗೆ ಹಣ ಸೇರಲಿದೆ.
-ಸಿದ್ದಮಹಾದೇವಯ್ಯ, ಪ್ರಾದೇಶಿಕ ವ್ಯವಸ್ಥಾಪಕ, ರಾಜ್ಯ ಉಗ್ರಾಣ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.