ADVERTISEMENT

ಮುರುಘಾ ಮಠ ಆಡಳಿತ: 3 ದಿನಗಳಲ್ಲಿ ಸಮಿತಿ- ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 14:32 IST
Last Updated 27 ಫೆಬ್ರುವರಿ 2024, 14:32 IST
ಚಿತ್ರದುರ್ಗ ಮುರುಘಾ ಮಠ
ಚಿತ್ರದುರ್ಗ ಮುರುಘಾ ಮಠ   

ನವದೆಹಲಿ: ಚಿತ್ರದುರ್ಗದ ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತವನ್ನು ನೋಡಿಕೊಳ್ಳಲು ಮೂರು ದಿನಗಳಲ್ಲಿ ಸಮಿತಿ ರಚಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ. ಮಠದ ಆಡಳಿತದಲ್ಲಿ ಶಿವಮೂರ್ತಿ ಶರಣರು ಹಸ್ತಕ್ಷೇಪ ನಡೆಸಬಾರದು ಹಾಗೂ ಆಡಳಿತದ ಭಾಗವಾಗಿರಬಾರದು ಎಂದೂ ಕೋರ್ಟ್‌ ಸೂಚಿಸಿದೆ. 

ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅಡಿ ಮುರುಘಾ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿದ್ದ ಚಿತ್ರದುರ್ಗ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಹೈಕೋರ್ಟ್‌
ವಜಾಗೊಳಿಸಿದ್ದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್‌.ಏಕಾಂತಯ್ಯ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪೋಕ್ಸೊ ಪ್ರಕರಣದ ಆರೋಪಿಯಾಗಿರುವ ಶರಣರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜಪ್ಪ ಡಿ. ಎಂಬುವರು ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಹಾಗೂ ಪ್ರಶಾಂತ್‌ ಕುಮಾರ್ ಮಿಶ್ರಾ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ. 

ಏಕಾಂತಯ್ಯ ಪರವಾಗಿ ಹಿರಿಯ ವಕೀಲರಾದ ಪಿ.ಬಿ. ಸುರೇಶ್‌, ಸುಘೋಷ್‌ ಸುಬ್ರಹ್ಮಣ್ಯಂ ಹಾಗೂ ಚೈತನ್ಯ ವಾದ ಮಂಡಿಸಿ, ‘ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಶರಣರ ವಿರುದ್ಧ ಗುರುತರ ಆರೋಪಗಳನ್ನು ಹೊರಿಸಲಾಗಿದೆ. ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ, ಅವರು ಮಠ ಹಾಗೂ ಮಠಕ್ಕೆ ಸಂಬಂಧಿಸಿದ ಸಂಸ್ಥೆಗಳ ಆಡಳಿತ ನಿರ್ವಹಣೆ ಮಾಡುವುದು ಸರಿಯಲ್ಲ’ ಎಂದು ವಾದಿಸಿದರು. ಶರಣರ ಪರವಾಗಿ ಹಿರಿಯ ವಕೀಲ ಶೈಲೇಶ್ ಮಡಿಯಾಳ್‌ ವಾದ ಮಂಡಿಸಿ, ‘ಮಠ ಮಾನ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು ಎಂದು ಹೈಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ’ ಎಂದರು. 

ADVERTISEMENT

‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ್ದರು. 2022ರ ಸೆಪ್ಟೆಂಬರ್ 1ರಂದು ಶರಣರನ್ನು ಬಂಧಿಸಲಾಗಿತ್ತು. ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿತ್ತು. ಇನ್ನೊಂದೆಡೆ, ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.