ADVERTISEMENT

ಸಿಂಧೂರಿ ವಿರುದ್ಧದ ಪೋಸ್ಟ್‌ ತೆಗೆಯುವಂತೆ ರೂಪಾಗೆ ಸುಪ್ರೀಂ ಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 16:19 IST
Last Updated 14 ಡಿಸೆಂಬರ್ 2023, 16:19 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕರ್ನಾಟಕದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧದ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ಗಳನ್ನು ಶುಕ್ರವಾರದೊಳಗೆ ತೆಗೆದು ಹಾಕಬೇಕು ಎಂದು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ. ಒಂದು ವೇಳೆ ಅವುಗಳನ್ನು ತೆಗೆಯಲು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ರೋಹಿಣಿ ವಿರುದ್ಧದ ಎಲ್ಲ ಹೇಳಿಕೆಗಳನ್ನು ವಾಪಸ್‌ ಪಡೆದಿದ್ದೇನೆ ಎಂದೂ ಪೋಸ್ಟ್ ಮಾಡಬೇಕು ಎಂದು ಕೋರ್ಟ್‌ ಹೇಳಿದೆ. 

‘ನನ್ನ ವಿರುದ್ಧ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಆರೋಪದ ಖಾಸಗಿ ದೂರನ್ನು ರದ್ದುಪಡಿಸಬೇಕು’ ಎಂದು ಕೋರಿ ಡಿ.ರೂಪಾ ಮೌದ್ಗಿಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್.ಓಕಾ ಹಾಗೂ ಪಂಕಜ್‌ ಮಿತ್ತಲ್ ಅವರನ್ನು ಒಳಗೊಂಡ ಪೀಠವು ಮೌಖಿಕ ನಿರ್ದೇಶನ ನೀಡಿತು. 

ಇಬ್ಬರು ಅಧಿಕಾರಿಗಳು ಮಧ್ಯಸ್ಥಿಕೆ ಮೂಲಕ ತಮ್ಮ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಸಲಹೆ ನೀಡಿತ್ತು. ಮಧ್ಯಸ್ಥಿಕೆ ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ಗುರುವಾರ ತಿಳಿಸಲಾಯಿತು. ಇಬ್ಬರೂ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಕ್ರಿಮಿನಲ್‌ ಪ್ರಕರಣವನ್ನು ಹಿಂಪಡೆಯಲು ಸಿಂಧೂರಿ ಒಪ್ಪಲಿಲ್ಲ. 

ADVERTISEMENT

ಅಧಿಕಾರಿಗಳಿಬ್ಬರು ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳದಿರುವುದಕ್ಕೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ‘ಐಎಎಸ್‌–ಐಪಿಎಸ್‌ ಅಧಿಕಾರಿಗಳು ಈ ರೀತಿ ಕಚ್ಚಾಟ ನಡೆಸಿದರೆ ಆಡಳಿತ ಹೇಗೆ ನಡೆಯುತ್ತದೆ’ ಎಂದು ಓಕಾ ಪ್ರಶ್ನಿಸಿದರು. 

ಸಾಮಾಜಿಕ ಜಾಲತಾಣಗಳ ಮೂಲಕ ರೂಪಾ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ರೋಹಿಣಿ ಅವರು ಪೀಠಕ್ಕೆ ತಿಳಿಸಿದರು. ‘ನನ್ನ ಕುಟುಂಬದವರನ್ನು ಎಳೆದು ತಂದಿದ್ದು ಏಕೆ? ರಾಜ್ಯದಲ್ಲಿ ನಾನು ಹೇಗೆ ಕೆಲಸ ಮಾಡಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು. ‘ಸಿಂಧೂರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ನೀವು ತನಿಖೆ ನಡೆಸುತ್ತಾ ಇದ್ದೀರಾ’ ಎಂದು ರೂಪಾ ಅವರನ್ನು ಪೀಠ ಪ್ರಶ್ನಿಸಿತು. ಆಗ ರೂಪಾ, ‘ಇಲ್ಲ’ ಎಂದು ಉತ್ತರಿಸಿದರು. ‘ಯಾರೋ ಮಾಡಿದ ಆರೋಪದ ಬಗ್ಗೆ ಮತ್ಯಾರೋ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಿಮಗಿರುವ ಹಿತಾಸಕ್ತಿ ಏನು’ ಎಂದು ಪೀಠ ಪ್ರಶ್ನಿಸಿತು. 24 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿತು. ಈ ವಿವಾದಕ್ಕೆ ಕೊನೆ ಹಾಕಲು ಬಯಸಿದ್ದೇವೆ. ಆ ಕಾರಣಕ್ಕೆ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೀಠ ಹೇಳಿತು.

ಪ್ರಕರಣವೇನು?: ‘ನನ್ನ ವಿರುದ್ಧ ಡಿ.ರೂಪಾ ಮೌದ್ಗಿಲ್ 2023ರ ಫೆಬ್ರುವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಇದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಾನಸಿಕ ಯಾತನೆ ಉಂಟು ಮಾಡಿದೆ’ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾರ್ಚ್ 3ರಂದು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

‘ಮಾನಹಾನಿ ಮತ್ತು ಮಾನಸಿಕ ಯಾತನೆ ಉಂಟು ಮಾಡಿರುವುದಕ್ಕಾಗಿ ಡಿ.ರೂಪಾ ಅವರಿಂದ ₹ 1 ಕೋಟಿ ಮೊತ್ತವನ್ನು ಪರಿಹಾರ ರೂಪವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು. ದೂರು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಮಾರ್ಚ್‌ 24ರಂದು ಆದೇಶಿಸಿತ್ತು. ಈ ಆದೇಶ ಮತ್ತು ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ರೂಪಾ 2023ರ ಮೇ 31ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.