ADVERTISEMENT

ಅನರ್ಹರಿಗೆ ನೆಮ್ಮದಿ ಕೊಟ್ಟ ತೀರ್ಪು: ಸ್ಪೀಕರ್‌ ನಿರ್ಧಾರಕ್ಕೂ ಮಾನ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2019, 13:09 IST
Last Updated 13 ನವೆಂಬರ್ 2019, 13:09 IST
   

ನವದೆಹಲಿ:ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ 17 ಮಂದಿ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು. ಗೆಲುವು ಸಾಧಿಸಿದರೆ ಮಾತ್ರ ಮಂತ್ರಿಯಾಗಲು ಅವಕಾಶವಿದೆಎಂದು ಸುಪ್ರೀಂಕೋರ್ಟ್‌ ಹೇಳಿದೆ.

ರಾಜ್ಯ ರಾಜಕೀಯದ ಮೇಲೆ ನಾನಾ ರೀತಿಯ ಪರಿಣಾಮ ಬೀರಲಿರುವ ಈ ತೀರ್ಪು ಎಲ್ಲರ ಕುತೂಹಲದ ಕೇಂದ್ರವೂ ಆಗಿತ್ತು. ಇದೀಗ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾಗಿದ್ದು, ಸ್ಪೀಕರ್‌ ನಡೆ ಸರಿಯಿದೆ ಆದರೆ ಅನರ್ಹತೆಯ ಅವಧಿ ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಖಾಲಿ ಇರುವ ಕ್ಷೇತ್ರಗಳ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಉಪ ಚುನಾವಣೆಗೆ ಸ್ಪರ್ಧಿಸಲು ‌ಅವಕಾಶ ನೀಡಬಹುದೇ ಎಂಬುದನ್ನು ಪರಿಶೀಲಿಸಲಾಗಿದೆ. ಅನರ್ಹತೆಯ‌ನ್ನು ನಾವು ಒಪ್ಪಿದ್ದೇವೆ. ಆದರೆ ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೆ ಅನರ್ಹ ಎನ್ನುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಶಾಸಕರನ್ನು ಅನರ್ಹಗೊಳಿಸಿದಸ್ಪೀಕರ್‌ ನಡೆ ಸರಿಯಿದೆ. ಶಾಸಕರ ನಡೆಯನ್ನು ಪ್ರೋತ್ಸಾಹಿಸಲು ಆಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಕುದುರೆ ವ್ಯಾಪಾರವನ್ನು ಪರಿಗಣಿಸಿ ರಾಜೀನಾಮೆಯನ್ನು ಸ್ವೀಕರಿಸದಿರುವ ಸ್ಪೀಕರ್‌ಗೆ ಅನರ್ಹಗೊಳಿಸಲು ಪರಮಾಧಿಕಾರ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ನ್ಯಾಯಾಂಗ ಈ ತೀರ್ಪಿನ ಮೂಲಕ ತನ್ನ ನಿಲುವು ಸ್ಪಷ್ಟಪಡಿಸಲಿದೆ. ಈ ಹಿನ್ನೆಲೆಯಲ್ಲಿ ಇದು ದೇಶದ ಭವಿಷ್ಯದ ದೃಷ್ಟಿಯಿಂದ ದಿಕ್ಸೂಚಿ ತೀರ್ಪು ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು.

ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪು ಈ ತೀರ್ಪು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.