ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢರ ಪರಮಭಕ್ತರಾಗಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಇತ್ತೀಚೆಗಷ್ಟೇ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹೆಸರಿಡುವ ಮೂಲಕ ಭಕ್ತಿ ಸಮರ್ಪಿಸಿದ್ದರು.
2009 ರಿಂದ ರೈಲ್ವೆ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಢರ ಹೆಸರಿಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಅದು ಸುರೇಶ ಅಂಗಡಿ ಅವರು ಸಚಿವರಾಗಿದ್ದಾಗ ಈಡೇರಿತ್ತು. ಹುಬ್ಬಳ್ಳಿಗೆ ಹಲವಾರು ಬಾರಿ ಭೇಟಿ ನೀಡಿದಾಗಲೂ ಸದ್ಗುರು ಸಿದ್ಧಾರೂಢ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದರು.
‘ಅಂಗಡಿ ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ, ಸಿದ್ಧಾರೂಢ ಅಜ್ಜರಿಗೆ ಪೂಜೆ ಮಾಡಿಸಿ, ಪ್ರಸಾದವನ್ನು ಅಂಗಡಿಯವರಿಗೆ ಕಳುಹಿಸಿದ್ದೆ. ಆ ನಂತರವಷ್ಟೇ ಅವರು ನಾಮಪತ್ರ ಸಲ್ಲಿಸಿದ್ದರು’ ಎಂದು ಬಿಜೆಪಿ ಮುಖಂಡ ರಂಗಾ ಬದ್ದಿ ಸ್ಮರಿಸಿಕೊಂಡರು.
ಇದನ್ನೂ ಓದಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ
ಹುಬ್ಬಳ್ಳಿ–ಎಂಜಿಆರ್ ಸೆಂಟ್ರಲ್ ಚನ್ನೈಗೆ, ವಿಜಯಪುರ–ಹುಬ್ಬಳ್ಳಿ ಇಂಟರ್‌ಸಿಟಿ ರೈಲು ಸಂಚಾರ ಆರಂಭಿಸುವ ಮೂಲಕ ಹೊಸ ರೈಲುಗಳ ಈ ಭಾಗದ ಜನರ ಬೇಡಿಕೆ ಈಡೇರಿಸಿದ್ದರು. ಶ್ರೀಕೃಷ್ಣ ಕಲ್ಯಾಣಮಂಟಪದ ಬಳಿಯ ರೈಲ್ವೆ ಕೆಳಸೇತುವೆ, ಉಣಕಲ್ ರೈಲ್ವೆ ನಿಲ್ದಾಣದ ಬಳಿ ನಿರ್ಮಿಸಲು ಉದ್ದೇಶಿಸಿರುವ ಸಬ್‌ವೇ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಹುಬ್ಬಳ್ಳಿಯಲ್ಲಿ ರೈಲ್ವೆ ಮ್ಯೂಸಿಯಂ ಇತ್ತೀಚೆಗೆ ಆರಂಭವಾಗಿದೆ. ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ನೇಮಕಾತಿ ಮಂಡಳಿಯ ಸ್ಯಾಟ್‌ಲೈಟ್ ಕಚೇರಿ, ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಎರಡನೇ ಪ್ರವೇಶ ಮಾರ್ಗವನ್ನೂ ಉದ್ಘಾಟಿಸಿದ್ದರು.
ಹುಬ್ಬಳ್ಳಿ–ವಾರಣಾಸಿ ನಡುವೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ರೈಲು ನಿತ್ಯ ಸಂಚರಿಸುವಂತೆ ಮಾಡಲು ಮುಂದಾಗಿದ್ದರು. ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣ ಆರಂಭಿಸಲು ಉತ್ಸುಕರಾಗಿದ್ದರು. ಆ ನಿಟ್ಟಿನಲ್ಲಿ ಕ್ರಮದ ಭರವಸೆಯೂ ನೀಡಿದ್ದರು.
ಬೆಳಗಾವಿ ನಾಡಹಬ್ಬದ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿದ್ದರು...
ಬೆಳಗಾವಿ: ಸುರೇಶ ಅಂಗಡಿ ಅವರು 1927ರಲ್ಲಿ ಪ್ರಾರಂಭವಾದ ಬೆಳಗಾವಿ ನಾಡಹಬ್ಬದ ಭವ್ಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಧೀಮಂತಗೊಳಿಸಲು 1998ರಿಂದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾಷಾ ಸೂಕ್ಷ್ಮ ಇರುವ ಈ ನಗರದಲ್ಲಿ ನವರಾತ್ರಿ ಉತ್ಸವವನ್ನು ನಡೆಸಿಕೊಂಡು ಬಂದ ಹಿರಿಮೆ ಗರಿಮೆ ಅವರಿಗೆ ಸಲ್ಲುತ್ತದೆ. ನಾಡಹಬ್ಬದ ಕಾರ್ಯಕಲಾಪಗಳಿಗೆ ಎಂದೂ ತಪ್ಪಿಸಿದವರಲ್ಲ.
‘ಹಲವು ಭಾಷೆಗಳನ್ನು ಅವರು ಬಲ್ಲವರಾಗಿದ್ದರು. ಕನ್ನಡ ಎಲ್ಲ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. 70ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ಅವರು ವಹಿಸಿದ್ದರು’ ಎಂದು ನಾಡಹಬ್ಬ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಕೆ. ಜೋರಾಪೂರ ನೆನೆದರು.
ಕುಟುಂಬದವರಿಗೆ ಧೈರ್ಯ ಹೇಳಿದ ಅಧಿಕಾರಿಗಳು
ಬೆಳಗಾವಿ: ಸುರೇಶ ಅಂಗಡಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಮನೆಗೆ ತೆರಳಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೊದಲಾದ ಅಧಿಕಾರಿಗಳು, ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವಂತೆ ಕುಟುಂಬದವರು ಹಾಗೂ ಅಭಿಮಾನಿಗಳು ಅಧಿಕಾರಿಗಳನ್ನು ದುಃಖಿಸುತ್ತಾ ಕೋರಿಕೊಂಡರು.
‘ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲಾಗುತ್ತದೆಯೇ ಇಲ್ಲವೇ ಎನ್ನುವ ಬಗ್ಗೆ ತಡರಾತ್ರಿವರೆಗೂ ನಮಗೆ ಸ್ಪಷ್ಟ ಮಾಹಿತಿ ಇಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಇನ್ನಷ್ಟು ಓದು:
* ಗುಣಮಟ್ಟದ ಶಿಕ್ಷಣದ ಪಣ: ಶಿಕ್ಷಣ ಪ್ರತಿಷ್ಠಾನ ಸ್ಥಾಪಿಸಿದ ಸುರೇಶ ಅಂಗಡಿ
* ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.