ADVERTISEMENT

ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣ: ಸಿಬಿಐ ತನಿಖೆಗೆ ಸುರೇಶ್ ಕುಮಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 9:12 IST
Last Updated 25 ಅಕ್ಟೋಬರ್ 2023, 9:12 IST
ಎಸ್‌. ಸುರೇಶ್ ಕುಮಾರ್
ಎಸ್‌. ಸುರೇಶ್ ಕುಮಾರ್   

ಬೆಂಗಳೂರು: ಹೆಬ್ಬಾಳದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಿಬಿಐ ಅಥವಾ ಎನ್‍ಐಎ ತನಿಖೆ ಮಾಡಬೇಕು ಎಂದು ರಾಜ್ಯದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‍ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್‍ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ; ಸಮಾಜದ ಅಳಿವು ಉಳಿವಿನ ಪ್ರಶ್ನೆ ಎಂದು ತಿಳಿಸಿದರು.

ಜನ್ಮ ದೃಢೀಕರಣ ಪತ್ರವನ್ನೂ ನೀಡದೆ ಆಧಾರ್ ಕಾರ್ಡ್ ಮಾಡಲಾಗಿದೆ ಎಂದರೆ, ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು ಎಂದು ಪ್ರಶ್ನಿಸಿದರು. ಇದನ್ನೂ ಗಂಭೀರವಾಗಿ ಪರಿಗಣಿಸಬೇಕು. ಇದನ್ನು ಚುನಾವಣಾ ಗೆಲುವಿಗಾಗಿ ಮಾಡಿಸಿದ್ದಾರೆ. ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‍ಐಎ ಅಥವಾ ಸಿಬಿಐಗೆ ಇದನ್ನು ಒಪ್ಪಿಸಲು ಕೋರಲಿದ್ದೇವೆ ಎಂದು ತಿಳಿಸಿದರು.

ADVERTISEMENT

ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಮ್ಮ ಗಾಂಭೀರ್ಯತೆ ತೋರಿಸಲಿ ಎಂದು ಒತ್ತಾಯಿಸಿದರು. ಬೈರತಿ ಸುರೇಶ್ ವಿಚಾರಣೆಯೂ ನಡೆಯಬೇಕು ಎಂದು ಆಗ್ರಹಿಸಿದರು.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್‍ಸ್ಪೆಕ್ಟರ್ ಅವರು ಇದೇ 19ರಂದು ಆರ್‍ಟಿ ನಗರದ ಸುಲ್ತಾನ ಪಾಳ್ಯ ಬನಶಂಕರಿ ಕಾಂಪ್ಲೆಕ್ಸ್‍ನ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‍ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತಿತರ ದಾಖಲಾತಿಗಳನ್ನು ತಮ್ಮ ಅಂಗಡಿಯ ಕಂಪ್ಯೂಟರ್‍ನಲ್ಲಿ ಸುಳ್ಳು ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್ ಮಾಲೀಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು ಎಂದರು.

ಸೆಕ್ಷನ್ 420 ಸೇರಿ ಹಲವು ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್ ಅಪರಾಧ. ಆರೋಪಿಗಳು ಶಾಸಕ- ಸಚಿವ ಬೈರತಿ ಸುರೇಶ್ ಅವರು ನಿಕಟವರ್ತಿಗಳು ಎಂದು ಆರೋಪಿಸಿದರು. ಮೌನೇಶ್ ಸ್ಕೂಟರ್ ರೈಡ್ ಮಾಡುತ್ತಿದ್ದು, ಬೈರತಿ ಸುರೇಶ್ ಅವರು ಹಿಂದೆ ಕುಳಿತ ಫೋಟೋವನ್ನು ಇದೇವೇಳೆ ಪ್ರದರ್ಶಿಸಿದರು.

ನಕಲಿ ಮತದಾರರ ಗುರುತು ಚೀಟಿ ಸಿದ್ಧಪಡಿಸುವುದು ಕೂಡ ರಾಷ್ಟ್ರೀಯ ಅಪರಾಧ. ರಾಷ್ಟ್ರೀಯ ಭದ್ರತೆಯ ವಿರುದ್ಧ ನಡೆದ ಕುಕೃತ್ಯದ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ. ಬೈರತಿ ಸುರೇಶ್ ಅವರು ಸಿಎಂಗೆ ಹತ್ತಿರದವರೆಂದು ಎಲ್ಲರೂ ಮಾತನಾಡುತ್ತಾರೆ ಎಂದು ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ಅವರು ಮಾತನಾಡಿ, ಭಾರತದಲ್ಲಿ ಪೌರತ್ವ ಗುರುತುಚೀಟಿ ಇಲ್ಲ; ಅದಕ್ಕೆ ಹತ್ತಿರದ ಹೋಲಿಕೆಯ ಕಾರ್ಡ್ ಆಧಾರ್ ಕಾರ್ಡ್. ಇದರ ಮೂಲಕ ಹಲವಾರು ಸೌಲಭ್ಯ ಪಡೆಯಬಹುದು ಎಂದರು. ಬಾಂಗ್ಲಾದೇಶದಿಂದ ಬಂದ ನಿವಾಸಿಗಳು ಅತ್ಯಂತ ಸುಲಭವಾಗಿ ಇಂಥ ನಕಲಿ ಗುರುತಿನ ಚೀ ಟಿ ಪಡೆಯುವಂತಾಗಿದೆ ಎಂದು ಆಕ್ಷೇಪಿಸಿದರು.

ಭಾರತೀಯ ನಿವಾಸಿಗಳು ಕೆಲವು ಸಂದರ್ಭಗಳಲ್ಲಿ ಕೋರ್ಟಿಗೆ ಹೋಗಿ, ಪುರಾವೆ ನೀಡಿ ಅತ್ಯಂತ ಕಷ್ಟದಿಂದ ಆಧಾರ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಇಲ್ಲಿ ಬೇರೆ ದೇಶದವರು ಸಲೀಸಾಗಿ ನಕಲಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ; ಇದನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಸರಕಾರ ಇದರ ಹಿಂದಿನ ಜಾಲವನ್ನು ಭೇದಿಸಿ ಪೂರ್ಣ ಜಾಲವನ್ನು ಬಂಧಿಸಲು ಸೂಚಿಸಬೇಕು. ಚುನಾವಣಾ ಆಯೋಗವು ಇಂಥ ಮತದಾರರ ನಕಲಿ ಗುರುತುಚೀಟಿ ಕುರಿತಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.