ಬೆಂಗಳೂರು: 5, 8, 9 ಹಾಗೂ 11ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿಸಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಕುರಿತು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
‘ರಾಜ್ಯದಲ್ಲಿ 5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ (ಮೌಲ್ಯಾಂಕನ) ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈಗಾಗಲೇ ಎರಡು ಪತ್ರಿಕೆಗಳ ‘ಪರೀಕ್ಷೆ’ ಮುಗಿದ ನಂತರ ಈ ತಡೆಯಾಜ್ಞೆ ಆದೇಶ ಹೊರಬಿದ್ದಿದೆ. ಕಳೆದ 10 ದಿನಗಳಲ್ಲಿ ಇದು ಎರಡನೇ ತಡೆಯಾಜ್ಞೆಯಾಗಿದೆ. ಇದರಿಂದಾಗಿ ಶಾಲಾ ಮಕ್ಕಳು ಮತ್ತು ಅವರ ಪೋಷಕರ ಮನಸ್ಸಿನ ಪರಿಸ್ಥಿತಿ ಹೇಗಿರಬಹುದು? ಎಲ್ಲರಿಂದ ಹೆಚ್ಚು ಸೂಕ್ಷ್ಮತೆ ಬೇಕಿತ್ತು’ ಎಂದು ಸುರೇಶ್ ಕುಮಾರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಇದೇ ಮಾರ್ಚ್ 13ರಿಂದ 16ವರೆಗೆ ನಡೆಯಬೇಕಿದ್ದ 5, 8 ಹಾಗೂ 9ನೇ ತಗರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಮಾಹಿತಿ ನೀಡಿವೆ.
2023–24ನೇ ಸಾಲಿನ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು (ಸಂಕಲನಾತ್ಮಕ ಮೌಲ್ಯಾಂಕನ/ಎಸ್‌ಎ–2) ಮಾರ್ಚ್ 11ರಿಂದ ಆರಂಭವಾಗಿದ್ದವು. ಈಗಾಗಲೇ ಎರಡು ವಿಷಯಗಳ ಪರೀಕ್ಷೆಗಳು ಮುಗಿದಿವೆ. 5ನೇ ತರಗತಿಗೆ ಮಾರ್ಚ್ 14ರವರೆಗೆ, 8 ಹಾಗೂ 9ನೇ ತರಗತಿಗೆ ಮಾರ್ಚ್ 16ರವರೆಗೆ ಪರೀಕ್ಷೆಗಳನ್ನು ನಡೆಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.