ಬೆಳಗಾವಿ: ಕಬ್ಬು ತೂಕದಲ್ಲಿ ಮೋಸ, ದರ ವ್ಯತ್ಯಾಸ ಮತ್ತು ಕೂಲಿಕಾರ್ಮಿಕರ ಬವಣೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಚರ್ಚೆಗೆ ಗ್ರಾಸವಾದವು.
ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್, ‘ಪ್ರತಿ ಟನ್‌ಗೆ ಆಂಧ್ರಪ್ರದೇಶದಲ್ಲಿ ₹3,200, ತಮಿಳುನಾಡಿನಲ್ಲಿ ₹3,150, ಉತ್ತರ ಪ್ರದೇಶದಲ್ಲಿ ₹3,500, ಹರಿಯಾಣದಲ್ಲಿ ₹3,700, ಪಂಜಾಬ್‌ನಲ್ಲಿ ₹3,800 ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಅತಿ ಕಡಿಮೆ ದರ ನೀಡಲಾಗುತ್ತಿದೆ. ಇದರಿಂದ, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ’ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅವರು, ‘ಬೇರೆ ರಾಜ್ಯಗಳಲ್ಲಿ ಎಸ್‌ಎಪಿ ಕಾನೂನು ಇದೆ. ಕರ್ನಾಟಕದಲ್ಲಿಈ ಕಾನೂನು ಜಾರಿಗೊಳಿಸಿಲ್ಲ. ಎಫ್‌ಆರ್‌ಪಿ ಆಧಾರದ ಮೇಲೆ ಹಲವು ಕಾರ್ಖಾನೆಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ನೀಡುತ್ತಿವೆ. 73 ಕಾರ್ಖಾನೆಗಳ ಪೈಕಿ 34ರಲ್ಲಿ ಎಥನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಹೊಸದಾಗಿ ಎಥನಾಲ್ ತಯಾರಿಸಲು 41 ಕಾರ್ಖಾನೆಗಳು ಅರ್ಜಿ ಸಲ್ಲಿಸಿವೆ. ಜತೆ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ನೀಡಬೇಕು‘ ಎಂದು ಸರ್ಕಾರ ಆದೇಶ ಹೊರಡಿಸಿದೆ’ ಎಂದು ವಿವರಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿ ಹೇಳಿಕೆ ನೀಡಲು ಮುಂದಾದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸಭಾಪತಿ ಅವಕಾಶ ನೀಡಲಿಲ್ಲ. ಆಗ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಆಕ್ಷೇಪ ವ್ಯಕ್ತಪಡಿಸಿ, ಹಿರಿಯ ಸಚಿವರ ಹೇಳಿಕೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ಕಾಂಗ್ರೆಸ್ ಸದಸ್ಯರು ಸಹ ಅವರಿಗೆ ಬೆಂಬಲ ಸೂಚಿಸಿ ಪೀಠದ ಮುಂದೆ ಧರಣಿನಡೆಸಿದರು.
‘ಕಬ್ಬು ಬೆಳೆ ಲಾಭದಾಯಕ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನ್ಯಾಯಬದ್ಧವಾಗಿರುವ ದರವನ್ನು ರೈತರಿಗೆ ಏಕೆ ಕೊಡುತ್ತಿಲ್ಲ’ ಎಂದು ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಪ್ರಶ್ನಿಸಿದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಕ್ಕರೆ ಸಚಿವರು, ‘ತೂಕದಲ್ಲಿ ಮೋಸ ಮಾಡುವುದನ್ನು ತಡೆಯಲು ಮೊದಲ ಬಾರಿ ದಾಳಿ ನಡೆಸಲಾಗಿದೆ. ಈ ರೀತಿ ದಾಳಿಗಳು ನಿರಂತರವಾಗಿ ನಡೆಯಲಿವೆ. ತೂಕದಲ್ಲಿ ಮೋಸ ಮಾಡಿದರೆ ಕ್ರಮ
ಕೈಗೊಳ್ಳುತ್ತೇವೆ’ ಎಂದರು.
ಗರ್ಭಿಣಿಯ ಸಂಕಷ್ಟ ಬಿಚ್ಚಿಟ್ಟ ಸವದಿ
ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿದ್ದ ಗರ್ಭಿಣಿಯೊಬ್ಬರ ಸಂಕಷ್ಟಗಳನ್ನು ಬಿಜೆಪಿ ಸದಸ್ಯ ಲಕ್ಷ್ಮಣ್ ಸವದಿ ವಿವರಿಸಿದರು.
‘ಈ ಮಹಿಳೆಯ ಕಷ್ಟ ನೋಡಿದರೆ ಎಂಥ ಕಟುಕನ ಕಣ್ಣಲ್ಲಿ ಕಣ್ಣೀರು ಬರಬೇಕು. ಎಂಟು ತಿಂಗಳ ಗರ್ಭಿಣಿ ಕಬ್ಬು ಕಟಾವು ಮಾಡಲು ಬಂದಿದ್ದರು. ಹೆರಿಗೆ ಸಂದರ್ಭದಲ್ಲಿ ಮೂರು ದಿನ ಮಾತ್ರ ರಜೆ ತೆಗೆದುಕೊಂಡು ಮತ್ತೆ ಕೆಲಸಕ್ಕೆ ಹಾಜರಾದರು. ಪ್ರತಿ ಟನ್‌ಗೆ ₹320–₹350 ಕೂಲಿ ಪಡೆಯುವ ಇಂತಹ ಕೂಲಿಕಾರ್ಮಿಕರು ರಕ್ತ ಸುಟ್ಟು, ಬೆವರು ಚೆಲ್ಲುತ್ತಾರೆ. ಇಂತಹ ತಾಯಿಯ ಶಾಪ ಮೋಸ ಮಾಡುವವರಿಗೆ ತಟ್ಟುವುದಿಲ್ಲವೇ? ನಿಮಗೆ ಕರುಣೆ ಬರುವುದಿಲ್ಲವೇ?’ ಎಂದು ಪ್ರಶ್ನಿಸಿದರು.
‘ಕಾರ್ಖಾನೆಗಳಲ್ಲಿ ಮೋಸ ಆಗುವುದಿಲ್ಲ ಎನ್ನುವುದನ್ನು ಒಪ್ಪುವುದಿಲ್ಲ. ತೂಕದಲ್ಲಿ 2–3 ಟನ್ ವ್ಯತ್ಯಾಸ ಮಾಡುವವರ ಫೋಟೊಗಳನ್ನು ಎಲ್ಲಿ ಹಾಕಬೇಕು. ಮೋಸ ಮಾಡುವವರಿಗೆ ಕೈಮುಗಿಯುತ್ತೇನೆ. ಕಾಲಿಗೆ ಬೀಳುತ್ತೇನೆ. ದಯವಿಟ್ಟು ಅನ್ಯಾಯ ಮಾಡಬೇಡಿ’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.