ಬೆಂಗಳೂರು: ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿರುವುದು ಮೂರನೇ ಕಂತಿಗಾಗಿ’ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೊದಲ ಕಂತು ಬಂತು, ಎರಡನೇ ಕಂತು ಬಂತು, ಈಗ ಮೂರನೇ ಕಂತು ಬೇಕಾಗಿದೆ. ಮೂರನೇ ಕಂತಿನಲ್ಲಿ ಚೌಕಾಸಿ ಆಗಬಾರದು ಎಂದು ಸ್ವತಃ ಅವರೇ ಬಂದಿದ್ದಾರೆ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ ಮೂರು ದಿನಗಳಲ್ಲಿ. ತೆಲಂಗಾಣದ ಉಸ್ತುವಾರಿಯನ್ನು ಕರ್ನಾಟಕದ ಉಪಮುಖ್ಯಮಂತ್ರಿಗೇ ನೀಡಿದ್ದಾರೆ. ಹಾಗಾಗಿ ಮೂರನೇ ಕಂತು ವಸೂಲಿಗೆ ಬಂದಂತಿದೆ’ ಎಂದು ಹೇಳಿದರು.
‘ಇವರಿಗೆ ಕರ್ನಾಟಕ ಇನ್ನೆಷ್ಟು ಕಂತುಗಳನ್ನು ಕೊಡಬೇಕೋ ಎಂದು ಕೇಳಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡುವ ಬಗ್ಗೆ ನಾವು ಮುಂಚೆಯೇ ತಿಳಿಸಿದ್ದೆವು. ಕಾಂಗ್ರೆಸ್ ಅನ್ನು ಗೆಲ್ಲಿಸಬೇಡಿ ಎಂದು ಜನರಿಗೆ ಮನವಿ ಮಾಡಿದ್ದೆವು. ಗ್ಯಾರಂಟಿ ಆಸೆಗೋ, ಇನ್ಯಾವುದೋ ಕಾರಣಕ್ಕೋ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಅದಕ್ಕೆ ರಾಜ್ಯದ ಜನ ಬೆಲೆ ತೆರಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.