ADVERTISEMENT

ರಮೇಶ್‌ ಸಿ.ಡಿ. ಪ್ರಕರಣ: ಎಸ್‌ಐಟಿ ವರದಿಗೆ ‘ಸುಪ್ರೀಂ’ ತಡೆ

ವಿಚಾರಣೆ ನಡೆಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 20:00 IST
Last Updated 18 ಫೆಬ್ರುವರಿ 2022, 20:00 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ನವದೆಹಲಿ: ಸಿ.ಡಿ. ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕ್ಲೀನ್‌ ಚಿಟ್‌ ನೀಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಂತಿಮ ವರದಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ರಮೇಶ ಜಾರಕಿಹೊಳಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಸಂತ್ರಸ್ತ ಯುವತಿಯು ಎಸ್‌ಐಟಿ ರಚನೆ
ಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ. ಮಾಹೇಶ್ವರಿ ಅವರಿದ್ದ ಪೀಠವು, ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಅಮಾನತಿನಲ್ಲಿರಿಸಿತು.

ಎಸ್‌ಐಟಿ ರಚನೆಯ ಸಿಂಧುತ್ವ ಪ್ರಶ್ನಿಸಲಾದ ಅರ್ಜಿಗಳ ವಿಚಾರಣೆಗೆ ನಿಗದಿಯಾಗಿರುವ ಮಾರ್ಚ್ 9ರಂದೇ ಪ್ರಕರಣದ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡಬಾರದು ಎಂದು ಪೀಠವು ಹೈಕೋರ್ಟ್‌ಗೆ ಸೂಚಿಸಿದೆ.

ADVERTISEMENT

ಪ್ರಕರಣದಲ್ಲಿ ಎಸ್‌ಐಟಿಯಿಂದ ಕ್ಲೀನ್‌ ಚಿಟ್‌ ಪಡೆದಿದ್ದ ರಮೇಶ ಜಾರಕಿಹೊಳಿಗೆ ಇದರಿಂದಾಗಿ ಮತ್ತೆ ಸಂಕಷ್ಟ ಎದುರಾದಂತಾಗಿದೆ.

‘ತನಿಖೆ ನಡೆಸಿರುವ ಎಸ್‌ಐಟಿಯು ಅಂತಿಮ ವರದಿಯನ್ನು ಈಗಾಗಲೇ ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೂ ಈ ಪ್ರಕರಣವನ್ನು ವಹಿಸಲಾಗಿದೆ. ಈ ಸಂಬಂಧ ದೂರುದಾರ ಯುವತಿಗೂ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಜಾರಕಿಹೊಳಿ ಪರ ವಕೀಲ ರಂಜಿತ್‌ ಕುಮಾರ್‌ ತಿಳಿಸಿದರು.

‘ಇದು ಸಚಿವ ಸ್ಥಾನದಲ್ಲಿದ್ದವರ ವಿರುದ್ಧದ ಅತ್ಯಾಚಾರ ಆರೋಪ. ಆರೋಪಿಯೇ ಸಲ್ಲಿಸಿದ್ದ ದೂರಿನನ್ವಯ ಮುಖ್ಯಮಂತ್ರಿಯವರೇತನಿಖೆಗಾಗಿ ಎಸ್‌ಐಟಿ ರಚಿಸಿದ್ದಾರೆ. ಸಂತ್ರಸ್ತ ಯುವತಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ಠಾಣೆಗೆ ನೀಡಿದ್ದ ದೂರಿನ ತನಿಖೆಯನ್ನೂ ಅದೇ ಎಸ್‌ಐಟಿಗೆ ವಹಿಸಲಾಗಿದೆ’ ಎಂದು ಅರ್ಜಿದಾರ ಯುವತಿ ಪರ ವಕೀಲ ವಿಕಾಸ್‌ ಸಿಂಗ್ಹೇಳಿದರು.

‘ಯಾರು ತನಿಖೆ ನಡೆಸಬೇಕು ಎಂಬುದನ್ನು ಆರೋಪಿಯೇನಿರ್ಧರಿಸಿದಂತಾಗಿದೆ. ಅಲ್ಲದೆ,ಎಸ್ಐಟಿ ರಚನೆಯ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನಲ್ಲಿ ಬಾಕಿ ಇದೆ. ಆದರೂ, ತನಿಖೆ ಪೂರ್ಣಗೊಳಿಸಿರುವ ಎಸ್ಐಟಿಯು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂಬ ಕಾರಣ ಮುಂದಿರಿಸಿ, ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿದೆ’ ಎಂದು ಅವರುವಿವರಿಸಿದರು.

‘ಸಮಾಜದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿ. ಅಲ್ಲಿಯವರೆಗೆ ಎಸ್‌ಐಟಿ ಸಲ್ಲಿಸಿರುವ ವರದಿಯ ಕುರಿತು ಯಾವುದೇ ಕ್ರಮ ಕೈಗೊಳ್ಳುವುದು ಬೇಡ’ ಎಂದು ಪೀಠಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.