ಬೆಂಗಳೂರು: ಅಪೌಷ್ಟಿಕತೆ, ರಕ್ತಹೀನತೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಸೂಕ್ತ ಪರಿಹಾರ ಒದಗಿಸಲು ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ಪ್ರಾರಂಭಿಸಿದೆ.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದೇ 30ರವರೆಗೆ ತಮ್ಮ ವ್ಯಾಪ್ತಿಯ ಕುಟುಂಬಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ಈ ಸಮೀಕ್ಷೆ ನಡೆಸಲಾಗುತ್ತದೆ. ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈಗ ರಾಜ್ಯದಾದ್ಯಂತ ನಡೆಸಲಾಗುತ್ತಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯದ ಸ್ಥಿತಿ, ಅಪೌಷ್ಟಿಕತೆ ಸಮಸ್ಯೆಯ ವಿವರ, ಗರ್ಭಿಣಿಯರಲ್ಲಿನ ರಕ್ತಹೀನತೆ, ರಕ್ತದೊತ್ತಡ–ಸಕ್ಕರೆ ಕಾಯಿಲೆ ಇರುವ ಗರ್ಭಿಣಿಯರು, ಕುಟುಂಬ ಕಲ್ಯಾಣ ವಿಧಾನಗಳ ಬಳಕೆ, ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವವರ ವಿವರ ಹಾಗೂ ಮಾನಸಿಕ ಆರೋಗ್ಯದ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಕುಟುಂಬಗಳ ಆರೋಗ್ಯ ಸ್ಥಿತಿ ಗುರುತಿಸಲಾಗುವುದು. ಸರ್ಕಾರ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಸಮೀಕ್ಷೆ ಸಹಕಾರಿಯಾಗಲಿದೆ. ಅಪೌಷ್ಟಿಕತೆ, ರಕ್ತಹೀನತೆ ಕಂಡು ಬಂದರೆ ಪೂರಕ ಆಹಾರ ನೀಡಲು ಈ ಸಮೀಕ್ಷೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.