ADVERTISEMENT

ಸೋತರೂ ಪರವಾಗಿಲ್ಲ, ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರುವೆ: ಸುಷ್ಮಾ ಸ್ವರಾಜ್

ಸಿದ್ದಯ್ಯ ಹಿರೇಮಠ
Published 7 ಆಗಸ್ಟ್ 2019, 4:52 IST
Last Updated 7 ಆಗಸ್ಟ್ 2019, 4:52 IST
   

ನವದೆಹಲಿ: ‘ಕಾಂಗ್ರೆಸ್‌ನ ಭದ್ರಕೋಟೆ’ ಎಂದೇ ಹೆಸರಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯ ಬೇರುಗಳನ್ನು ಆಳಕ್ಕೆ ಇಳಿಸಿದ ಕೀರ್ತಿ ಸುಷ್ಮಾ ಸ್ವರಾಜ್‌ ಅವರಿಗೆ ಸಲ್ಲುತ್ತದೆ.

ಅದು 90ರ ದಶಕದ ಕೊನೆಯಲ್ಲಿ (1999) ನಡೆದ ಲೋಕಸಭೆ ಚುನಾವಣೆ. ಹಿಂದುಳಿದ ಹೈದರಾಬಾದ್‌– ಕರ್ನಾಟಕದ ಭಾಗವಾದ ಬಳ್ಳಾರಿ ಲೋಕಸಭೆ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯಲು ಕಾರಣವಾಗಿದ್ದೇ ಸುಷ್ಮಾ ಸ್ವರಾಜ್‌ ಮತ್ತು ಸೋನಿಯಾ ಗಾಂಧಿ ನಡುವಿನ ಸ್ಪರ್ಧೆಯಿಂದಾಗಿ.

ಭಾರಿ ಪ್ರಚಾರಕ್ಕೆ ವೇದಿಕೆಯಾದ ಅಖಾಡದಲ್ಲಿ ಕೊನೆಗೆ ಸುಷ್ಮಾ 50,100 ಮತಗಳ ಅಂತರದಲ್ಲಿ ಸೋತರು. ಆದರೆ, ಇನ್ನೊಂದು ಅರ್ಥದಲ್ಲಿ ಅವರು ಸೋತು ಗೆದ್ದರು.

ADVERTISEMENT

ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲೂ ಗೆದ್ದಿದ್ದ ಸೋನಿಯಾ ಅವರು ‘ಕೈ’ಹಿಡಿದ ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರೆ, ಸುಷ್ಮಾ ಅದೇ ಬಳ್ಳಾರಿಯನ್ನು ‘ತವರು’ ಎಂದೇ ಹೇಳಿಕೊಂಡು, ದೂರದ ದೆಹಲಿಯಿಂದ ಪ್ರತಿವರ್ಷದ ವರಮಹಾಲಕ್ಷ್ಮಿ ಹಬ್ಬದಂದು ‘ಗಣಿ’ ಜಿಲ್ಲೆಗೆ ಹಾಜರಾಗಿ ಬಿಜೆಪಿಯ ಕಮಲವನ್ನು ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

1999ರಿಂದ 2010ರವರೆಗೆ ಸತತವಾಗಿ ತಾವೇ ಘೋಷಿಸಿಕೊಂಡ ತವರಿಗೆ ತಪ್ಪದೇ ಬಂದು, ಮತದಾರರೊಂದಿಗೆ ಅಚ್ಚ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆಯುತ್ತಿದ್ದರು.

ಇವರು ಕೊಟ್ಟ ಮಾತಿನಂತೆ ನಡೆದುಕೊಂಡು, ಮತದಾರರತ್ತ ಪ್ರೀತಿ ತೋರಿದ ಫಲವಾಗಿಯೇ ಐದು ವರ್ಷಗಳ ನಂತರ, 2004ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕ್ರಮವಾಗಿ ಬಿ.ಶ್ರೀರಾಮುಲು ಮತ್ತು ಗಾಲಿ ಕರುಣಾಕರರೆಡ್ಡಿ ಗೆದ್ದು ಕಾಂಗ್ರೆಸ್‌ಗೆ ಆಘಾತ ಮೂಡಿಸಿದ್ದರು. ಆ ಗೆಲುವಿನ ಹಿಂದೆ ಸುಷ್ಮಾ ಅವರ ಪಾತ್ರ ಪ್ರಮುಖವಾಗಿತ್ತು.

2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸುಷ್ಮಾ ಅವರ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರು ಕ್ಷೇತ್ರವೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು.

ಅಂತೆಯೇ ಸುಷ್ಮಾ ಅವರ ‘ಮಾನಸ ಪುತ್ರರು’ ಎಂದೇ ಹೇಳಿಕೊಂಡಿದ್ದ ರೆಡ್ಡಿ ಸೋದರರು ಮತ್ತು ಶ್ರೀರಾಮುಲು ರಾಜ್ಯ ರಾಜಕಾರಣದಲ್ಲಿ ಅತಿ ವೇಗವಾಗಿ ಪ್ರವರ್ಧಮಾನಕ್ಕೆ ಬಂದಿದ್ದರು. ಗಣಿಗಾರಿಕೆಯ ಗಂಧ ಗಾಳಿಯೂ ಗೊತ್ತಿಲ್ಲದೆಯೂ ‘ಗಣಿ ಧಣಿಗಳು’ ಎಂದು ಕರೆಯಿಸಿಕೊಂಡರು.

2009ರಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಇದೇ ‘ಗಣಿ ಧಣಿಗಳು’ ಬಂಡೆದ್ದಾಗ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಅವರನ್ನು ಇದೇ ಸುಷ್ಮಾ ದೆಹಲಿಯಲ್ಲಿ ಸಂಧಾನ ಏರ್ಪಡಿಸಿ ಕಾಪಾಡಿದ್ದರು.

ವಿಚಿತ್ರವೆಂದರೆ ಇನ್ನೊಂದೆಡೆ ಸುಷ್ಮಾ ಅವರನ್ನು ‘ಅಮ್ಮಾ’ ಎಂದು ಕರೆಯುತ್ತಿದ್ದ ಬಳ್ಳಾರಿಯ ರೆಡ್ಡಿ ಸೋದರರು ‘ಗೆಲುವು ನಮ್ಮದೇ’ ಎಂದು ಬೀಗಿದ್ದರು.

2010ರ ಜುಲೈನಲ್ಲಿ ಬೆಂಗಳೂರಿನಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಬಂದಿದ್ದ ಕಾಂಗ್ರೆಸ್‌ ಮುಖಂಡರ ಪ್ರಬಲ ವಿರೋಧಕ್ಕೆ ಉತ್ತರ ಕೊಡಲು ರೆಡ್ಡಿ ಸೋದರರು ಮತ್ತೆ ಇದೇ ಸುಷ್ಮಾ ಸ್ವರಾಜ್‌ ಅವರ ಜನಪ್ರಿಯತೆಯನ್ನು ಬಳಸಿಕೊಂಡಿದ್ದರು. ಆಗಸ್ಟ್‌ ತಿಂಗಳಲ್ಲಿ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ನಡೆದಿದ್ದ ಸ್ವಾಭಿಮಾನಿ ಸಮಾವೇಶವೇ ಸುಷ್ಮಾ ಅವರ ಬಳ್ಳಾರಿಯ ಕೊನೆಯ ಭೇಟಿಯಾಯಿತು.

ಅಕ್ರಮ ಗಣಿಗಾರಿಕೆಯ ಆರೋಪ ಎದುರಿಸಿದ ಯಡಿಯೂರಪ್ಪ, ಶ್ರೀರಾಮುಲು, ಜನಾರ್ದನರೆಡ್ಡಿ, ಕರುಣಾಕರ ರೆಡ್ಡಿ 2011ರಲ್ಲಿ ಅಧಿಕಾರ ತ್ಯಜಿಸಬೇಕಾಯಿತು.

‘ಈ ಅಕ್ರಮದ ಆರೋಪ ಎಲ್ಲಿ ನನ್ನತಲೆ ಏರುತ್ತದೋ’ ಎಂಬ ಆತಂಕದಲ್ಲೇ ಸುಷ್ಮಾ ಸ್ವರಾಜ್‌ ಇಂಗ್ಲಿಷ್‌ ನಿಯತಕಾಲಿಕೆಗೆ ನೀಡಿದ್ದ ಸಂದರ್ಶನದಲ್ಲಿ ‘ಈ ರೆಡ್ಡಿ ಸೋದರರು ನನಗೆ ಗೊತ್ತೇ ಇಲ್ಲ’ ಎಂಬ ಹೇಳಿಕೆಯನ್ನೂ ನೀಡಿ ‘ಜಾಣತನ’ ಮೆರೆದರು.

ಮುಂದೆ ಜನಾರ್ದನರೆಡ್ಡಿ ಜೈಲು ಪಾಲಾದರು. ರಾಮುಲು ಬಿಜೆಪಿ ತೊರೆದು ಪ್ರತ್ಯೇಕ ಪಕ್ಷ ಸ್ಥಾಪಿಸಿದರು. ಅಲ್ಲಿ ಸೋತು ಮತ್ತೆ ಬಿಜೆಪಿಗೆ ಬಂದರು. ಬಳ್ಳಾರಿಯಿಂದ ಲೋಕಸಭೆ ಪ್ರವೇಶಿಸಿದರು. ಆದರೂ ಅವರಿಗೆ ಮತ್ತೆ ತಮ್ಮ ‘ಅಮ್ಮ’ನನ್ನು ಬಳ್ಳಾರಿಗೆ ಕರೆದೊಯ್ಯಲು ಆಗಲಿಲ್ಲ.

1999ರಲ್ಲಿ ಸೋತರೂ ಕೇಂದ್ರದ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ ಬಳ್ಳಾರಿಗೆ ₹ 1,300 ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಪ್ರೇರಕವಾಗಿದ್ದರು. 2014ರಲ್ಲಿ ವಿದೇಶಾಂಗ ಸಚಿವೆಯಾಗಿ ದೇಶ– ವಿದೇಶಗಳ ಅನಿವಾಸಿ ಭಾರತೀಯರ ಮನ ಗೆದ್ದರು.

ಪ್ರತಿ ವರ್ಷದ ಶ್ರಾವಣದಲ್ಲಿ ಬಳ್ಳಾರಿಯಲ್ಲಿನ ಗಾಂಧಿನಗರದ ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿ ಶ್ರೀರಾಮುಲು ಏರ್ಪಡಿಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುತ್ತಿದ್ದ ಸುಷ್ಮಾ ಸ್ವರಾಜ್‌ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳುವುದು ಮಾತ್ರ ‘ವರಮಹಾಲಕ್ಷ್ಮಿ ಹಬ್ಬಕ್ಕೆ ತವರಿಗೆ ಬರುತ್ತಿದ್ದ ಮನೆಮಗಳು’ ಎಂದೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.