ADVERTISEMENT

ಉಗ್ರನ ಪತ್ನಿಗೆ ಆಧಾರ್, ಮತದಾರರ ಗುರುತಿನ ಚೀಟಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 9:04 IST
Last Updated 10 ಜೂನ್ 2022, 9:04 IST
ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ತಾಲಿಬ್ ಹುಸೇನ್
ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ತಾಲಿಬ್ ಹುಸೇನ್   

ಬೆಂಗಳೂರು: ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ಹಾಗೂ ನಾಲ್ಕು ವರ್ಷಗಳಿಂದ ನಗರದಲ್ಲಿ ವಾಸವಿದ್ದ ತಾಲಿಬ್ ಹುಸೇನ್ ಅಲಿಯಾಸ್ ತಾರಿಕ್ (36), ಪತ್ನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಆಧಾರ್ ಹಾಗೂ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಜಮ್ಮುವಿನಲ್ಲಿ ಸೈನಿಕರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರಕ್ಕೆ ಕಾರಣವಾಗಿದ್ದ ‘ಎ ದರ್ಜೆ’ ಉಗ್ರ ಎನ್ನಲಾದ ತಾಲಿಬ್‌ನನ್ನು ಇತ್ತೀಚೆಗಷ್ಟೇ ನಗರದ ಓಕಳಿಪುರದ ಮಸೀದಿ ಪಕ್ಕದ ಮನೆಯಲ್ಲಿ ಬಂಧಿಸಲಾಗಿದ್ದು, ಆತನ ಪೂರ್ವಾಪರ ತಿಳಿಯಲು ತನಿಖೆ ಮುಂದುವರಿದಿದೆ.

ಜಮ್ಮು–ಕಾಶ್ಮೀರದಿಂದ ದೆಹಲಿ ಮಾರ್ಗವಾಗಿ 2018ರಲ್ಲಿ ಬೆಂಗಳೂರಿಗೆ ಬಂದಿದ್ದ ತಾಲಿಬ್, ಯಶವಂತಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದ. ಅಲ್ಲಿಂದ ಮಾರುಕಟ್ಟೆಗೆ ಹೋಗಿ, ಕೆಲದಿನ ರಸ್ತೆ ಹಾಗೂ ಮಳಿಗೆ ಬಳಿಯೇ ಮಲಗಿದ್ದ ಎನ್ನಲಾಗಿದೆ.

ADVERTISEMENT

‘2020ರಲ್ಲಿ ಜಮ್ಮುವಿಗೆ ಹೋಗಿದ್ದ ತಾಲಿಬ್, ಪತ್ನಿ ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ. ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಲಾರಂಭಿಸಿದ್ದ. ತನ್ನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೂಲಕ ಮಸೀದಿ ಮುಖ್ಯಸ್ಥ ಅನ್ವರ್ ಪರಿಚಯ ಮಾಡಿಕೊಂಡಿದ್ದ. ಮಸೀದಿ ಪಕ್ಕ ಮನೆ ಪಡೆದು, ಕುಟುಂಬದ ಜೊತೆ ವಾಸವಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪತ್ನಿ ಹೆಸರಿನಲ್ಲೇ ನಕಲಿ ದಾಖಲೆ ಸೃಷ್ಟಿಸಿದ್ದ ತಾಲಿಬ್, ಆಧಾರ್ ಹಾಗೂ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಗುರುತಿನ ಚೀಟಿ ಆತನ ಮನೆಯಲ್ಲಿ ಸಿಕ್ಕಿದೆ. ಅದನ್ನು ಮಾಡಿಸಿಕೊಟ್ಟವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತಿಳಿಸಿವೆ.

ಜಮ್ಮು–ಕಾಶ್ಮೀರಕ್ಕೆ ವಿಶೇಷ ತಂಡ
‘ನಾಲ್ಕು ವರ್ಷ ಬೆಂಗಳೂರಿನಲ್ಲಿ ವಾಸವಿದ್ದ ತಾಲಿಬ್, ಹಲವರನ್ನು ಭೇಟಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತಂಡ ಜಮ್ಮು–ಕಾಶ್ಮೀರಕ್ಕೆ ಹೋಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಮ್ಮು–ಕಾಶ್ಮೀರ ಪೊಲೀಸರ ತಂಡವೂ ಬೆಂಗಳೂರಿಗೆ ಬಂದು ತನಿಖೆ ಮಾಡುತ್ತಿದೆ. ಅವರ ಜೊತೆಯಲ್ಲೇ ರಾಜ್ಯದ ಗುಪ್ತದಳ, ಐಎಸ್‌ಡಿ, ಎಟಿಎಸ್ ತಂಡಗಳು ಮಾಹಿತಿ ಹಂಚಿಕೊಳ್ಳುತ್ತಿವೆ’ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.