ಬೆಂಗಳೂರು: ವಿಧಾನಸಭಾ ಸದಸ್ಯತ್ವದಿಂದ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕು ಎಂದು ಕೋರಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಪತ್ರ ಬರೆದಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಪತನಕ್ಕೆ ಕಾರಣವಾದ ಅತ್ಯಂತ ಹೇಯ, ಅಸಭ್ಯ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಮಾತುಗಳನ್ನು ಮುನಿರತ್ನ ಆಡಿದ್ದಾರೆ. ಇಂತಹ ವರ್ತನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯಲು ‘ನೀತಿ-ನಿರೂಪಣಾ ಸಮಿತಿ’ ರಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ವಿಧಾನಸಭಾ ಸದಸ್ಯರನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸಬೇಕು. ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ಕಡಿವಾಣ ಹಾಕಲೇಬೇಕು. ಇಂತಹ ಅಸಭ್ಯ ವರ್ತನೆಗಳ ವಿರುದ್ಧ ವಿಧಾನಮಂಡಲ ಶೂನ್ಯ ಸಹನೆ ಹೊಂದಿರಬೇಕು ಎಂದಿದ್ದಾರೆ.
‘ಮುನಿರತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರು ಹಕ್ಕುಬಾದ್ಯತೆ ಪ್ರಶ್ನೆಯನ್ನು ಕಳುಹಿಸಬಹುದು, ಸಮಿತಿಯಿಂದ ಪ್ರಶ್ನೆಗಳ ಪರಿಶೀಲನೆ ನಡೆಸಿ, ಶಿಫಾರಸುಗಳನ್ನು ಮಾಡಬಹುದು. ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನೂ ಸೂಚಿಸಬಹುದು’ ಎಂದೂ ಅವರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.