ಬೆಂಗಳೂರು: ಭಾರತದ ಪ್ರವಾಸಕ್ಕೆ ಬಂದಿದ್ದ ಮಾಲ್ಡೀವ್ಸ್ ಪ್ರಜೆಯೊಬ್ಬರು ನಗರದ ಹೋಟೆಲ್‌ವೊಂದರ ಕೊಠಡಿಯಲ್ಲಿ ಶಂಕಾಸ್ಪದವಾಗಿ ಮೃತಪಟ್ಟಿದ್ದು, ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸನ್ ಸುಹೇಲ್(44) ಮೃತಪಟ್ಟವರು.
‘ಭಾರತದ ವಿವಿಧ ಸ್ಥಳಗಳ ವೀಕ್ಷಣೆಗೆ ಬಂದಿದ್ದ ಹಸನ್ ಸುಹೇಲ್ ಅವರು ನ.10ರಂದು ಆರ್.ಟಿ.ನಗರದ ಕನಕಶ್ರೀ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದರು. ಅಂದು ಹೊರಗೆ ಹೋಗಿ ಹೋಟೆಲ್‌ಗೆ ವಾಪಸ್ ಬಂದಿದ್ದರು. 11ರಂದು ನಗರದ ವಿವಿಧೆಡೆ ಸುತ್ತಾಟ ನಡೆಸಿದ್ದರು. 12ರಂದು ಕೊಠಡಿ ಖಾಲಿ ಮಾಡಬೇಕಿತ್ತು. ಆದರೆ, ಬೆಳಗ್ಗಿನ ತಿಂಡಿಗೂ ಹೊರಕ್ಕೆ ಬಂದಿರಲಿಲ್ಲ. ಹೋಟೆಲ್ ಸಿಬ್ಬಂದಿ ಮಧ್ಯಾಹ್ನ ಕೊಠಡಿ ಬಳಿಗೆ ತೆರಳಿ ಬಾಗಿಲು ತೆಗೆಯುವಂತೆ ಕೂಗಿದ್ದರು. ಆ ಕಡೆಯಿಂದ ಯಾವುದೇ ಪ್ರಕ್ರಿಯೆ ಬಂದಿರಲಿಲ್ಲ. ನಂತರ, ನಮಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
‘ಸ್ಥಳಕ್ಕೆ ತೆರಳಿ ಬಾಗಿಲು ಒಡೆದು ಪರಿಶೀಲಿಸಲಾಯಿತು. ಹಸನ್ ಸುಹೇಲ್ ಅವರು ಹಾಸಿಗೆಯಿಂದ ಕೆಳಕ್ಕೆ ಬಿದ್ದಿದ್ದರು. ವಾಂತಿ ಮಾಡಿಕೊಂಡಿದ್ದರು. ಕಡಿಮೆ ರಕ್ತದ ಒತ್ತಡದಿಂದ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿರುವ ಶಂಕೆಯಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಮಾಲ್ಡೀವ್ಸ್ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
‘ನವೆಂಬರ್ 13ರಂದು ಭೋಪಾಲ್ ಹಾಗೂ 14ರಂದು ಮುಂಬೈಗೆ ತೆರಳಲು ಹಸನ್ ಸುಹೇಲ್ ಅವರು ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. 14ರಂದು ಸಂಜೆಯೇ ತಮ್ಮ ದೇಶಕ್ಕೆ ವಾಪಸ್ ಆಗಲು ಟಿಕೆಟ್ ಪಡೆದಿದ್ದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.