ADVERTISEMENT

ಪ್ರಧಾನಿ ಬುದ್ಧಿವಂತ, ಹೃದಯವಂತರೂ ಆಗಲಿ

ಚಿಂತನಾ ಸಭೆಯಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:17 IST
Last Updated 10 ಜನವರಿ 2020, 13:17 IST
ಬೆಳಗಾವಿಯ ರುದ್ರಾಕ್ಷಿಮಠದಲ್ಲಿ ಶುಕ್ರವಾರ ನಡೆದ ಚಿಂತನ ಸಭೆಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ
ಬೆಳಗಾವಿಯ ರುದ್ರಾಕ್ಷಿಮಠದಲ್ಲಿ ಶುಕ್ರವಾರ ನಡೆದ ಚಿಂತನ ಸಭೆಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ   

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಬುದ್ಧಿವಂತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಗಡಿ ಹಾಗೂ ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಅವರು ಹೃದಯವಂತರೂ ಆಗಬೇಕು. ಆಗ, ಜನರ ಮನದಲ್ಲಿ ಉಳಿಯುತ್ತಾರೆ’ ಎಂದು ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಮಹದಾಯಿ (ಕಳಸಾ ಬಂಡೂರಿ) ಯೋಜನೆ ಅನುಷ್ಠಾನ ವಿಳಂಬ ಹಾಗೂ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಕುರಿತು ಇಲ್ಲಿನ ನಾಗನೂರ ರುದ್ರಾಕ್ಷಿ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿಂತನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿವಾದ ಬಗೆಹರಿಸಲು ಪ್ರಧಾನಿ ಮನಸ್ಸು ಮಾಡಬೇಕು. ಆದರೆ, ಬುದ್ಧಿವಂತ ಅವರು. ಜನ ಕೇಳುವುದನ್ನು ಮಾಡುತ್ತಿಲ್ಲ. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮಾಡುತ್ತಾರೆ. ಅದನ್ನು ಜಾರಿಗೊಳಿಸಿ ಎಂದು ಯಾರಾದರೂ ಕೇಳಿದ್ದರೇ?’ ಎಂದು ಟೀಕಿಸಿದರು.

ADVERTISEMENT

ಬುದ್ಧಿ ಹೇಳಬೇಕು

‘ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿ ‌ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.

‘ಸಮಸ್ಯೆಗಳನ್ನು ಉಲ್ಬಣಗೊಳಿಸುವವರು ಬುದ್ಧಿಜೀವಿಗಳು. ಪರಿಹರಿಸುವವರು ಹೃದಯವಂತರು. ಪ್ರಧಾನಿ ಅಂಥ ಹೃದಯವಂತಿಕೆ ಪ್ರದರ್ಶಿಸಬೇಕು’ ಎಂದರು.

‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ರೈತರ ಸಾಲ ಮನ್ನಾ ಮಾಡಲಾಗದೇ ಅಲ್ಲಿನ ಜನರ ಗಮನ ಬೇರೆಡೆ ಸೆಳೆಯಲು ಗಡಿ ವಿವಾದ ಕೆದಕಿದ್ದಾರೆ. ಅವರಿಗೆ ಪ್ರಧಾನಿ ಬುದ್ಧಿ ಹೇಳಬೇಕು’ ಎಂದು ಒತ್ತಾಯಿಸಿದರು.

ಗಂಭೀರವಾಗಿ ಪರಿಗಣಿಸಿ

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಗಡಿ ವಿಷಯದಲ್ಲಿ ಹೆಚ್ಚು ಪ್ರಚೋದಿಸುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗಡಿಗೆ ಸಂಬಂಧಿಸಿದ ಸಂಸ್ಥೆಗಳ ಕಚೇರಿಗಳನ್ನು ಸುವರ್ಣ‌ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಉನ್ನತ ಮಟ್ಟದ ಸಭೆ ನಡೆಸಬೇಕು. ಪ್ರಧಾನಿಯು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ವಿವಾದ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ನೆಲ, ಜಲ ರಕ್ಷಣೆಗೆ ಮುಂದಾಗದಿದ್ದರೆ ಸಂಸದರು, ಕೇಂದ್ರದ ಸಚಿವರು ಪೆಟ್ಟು ತಿನ್ನಬೇಕಾಗುತ್ತದೆ. ಬಿಜೆಪಿಯವರಿಗೆ ಪ್ರಧಾನಿ ಮುಂದೆ ಮಾತನಾಡುವ ಧೈರ್ಯವಿಲ್ಲದಿದ್ದಲ್ಲಿ ಮಠಾಧೀಶರು ಹಾಗೂ ನಮ್ಮಂಥ ಹೋರಾಟಗಾರರ ನಿಯೋಗ ಕರೆದೊಯ್ಯಲಿ’ ಎಂದರು.

ಸಾಲ ಪಾವತಿಸಬೇಡಿ

ಮಹದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಮಾತನಾಡಿ, ‘ನರಗುಂದ ಬಂಡಾಯ ಮಾದರಿ ಹೋರಾಟ ಆರಂಭಿಸಬೇಕಾಗಿದೆ. ನೀರು‌ ಸಿಗುವವರೆಗೂ ರೈತರು ಯಾವುದೇ ಸಾಲ ಪಾವತಿಸಬಾರದು. ಸರ್ಕಾರ ಏನು ಮಾಡುತ್ತದೆ ನೋಡೋಣ’ ಎಂದು ಗುಡುಗಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗಡಿಗೆ ಕನ್ನಡ ಹೋರಾಟಗಾರರೊಂದಿಗೆ ಕಾವಿಯ ಕಾವಲಿದೆ. ಸರ್ಕಾರವು ಕೂಡಲೇ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿ, ಮಹಾರಾಷ್ಟ್ರದೊಂದಿಗೆ ಕಾನೂನು ಹೋರಾಟ ನಡೆಸದಿದ್ದರೆ ತೊಂದರೆಯಾಗಲಿದೆ. ಹೀಗಾಗದಂತೆ ಮುಖ್ಯಮಂತ್ರಿ ನೋಡಿಕೊಳ್ಳಬೇಕು. ಕನ್ನಡಕ್ಕಾಗಿ ಇನ್ಮುಂದೆ ಬಾಯೆತ್ತಬೇಕು’ ಎಂದರು.

ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ‘ನಿತ್ಯವೂ ಅಲ್ಲಲ್ಲಿ 15 ನಿಮಿಷ ಹೆದ್ದಾರಿ ತಡೆದು ಪ್ರತಿಭಟಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು’ ಎಂದು ಸಲಹೆ ನೀಡಿದರು.

ಕನ್ನಡಪರ ಹೋರಾಟಗಾರ ಸಿದ್ದನಗೌಡ ಪಾಟೀಲ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವ ತಳವಾರ, ಮುಖಂಡರಾದ ಲಿಂಗರಾಜ ಪಾಟೀಲ, ಸಿದಗೌಡ ಮೋದಗಿ, ದೀಪಕ ಗುಡಗೇನಟ್ಟಿ, ಶ್ರೀನಿವಾಸ ತಾಳೂಕರ, ಡಾ.ಅಲ್ಲಮಪ್ರಭು ಸ್ವಾಮೀಜಿ, ಮಹಾಂತ ದೇವರು, ಭೈರನಟ್ಟಿಯ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.