ಬೆಂಗಳೂರು: ‘ಒಕ್ಕಲಿಗ ಹಾಗೂ ಲಿಂಗಾಯತ ಮಠಗಳೂ ಸೇರಿದಂತೆ ಕೆಲವು ಪ್ರಮುಖ ಮಠಾಧೀಶರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿತ್ತು’ ಎಂಬ ಸ್ಫೋಟಕ ಮಾಹಿತಿ ಬಯಲಿಗೆ ಬರುವುದರೊಂದಿಗೆ ಪ್ರಕರಣ ಇನ್ನಷ್ಟು ಕುತೂಹಲದ ತಿರುವು ಪಡೆದುಕೊಂಡಿದೆ.
ಇದುವರೆಗೆ ಕೆಲ ಶಾಸಕರು, ಸಚಿವರು, ವಿರೋಧ ಪಕ್ಷಗಳ ಮುಖಂಡರು ಮತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಮಿತ್ರಪಕ್ಷಗಳ ನಾಯಕರ ದೂರವಾಣಿ ಸಂಭಾಷಣೆಗಳನ್ನು ಮಾತ್ರ ಕದ್ದು ಕೇಳಲಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ, ರಾಜಕಾರಣಿಗಳ ಸಂಪರ್ಕದಲ್ಲಿರುವ ಪ್ರಮುಖ ಮಠಾಧೀಶರ ದೂರವಾಣಿ ಕರೆಗಳ ಮೇಲೂ ಕಳ್ಳಗಿವಿ ಇಡಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
ಕುತೂಹಲದ ವಿಷಯವೆಂದರೆ, ಖುದ್ದು ಸ್ವಾಮೀಜಿಗಳಿಗೆ ಸೇರಿದ ದೂರವಾಣಿ ಸಂಖ್ಯೆಗಳನ್ನು ನೇರವಾಗಿ ಕದ್ದಾಲಿಸಿಲ್ಲ. ಬದಲಿಗೆ ಯಾವಾಗಲೂ ಅವರ ಸುತ್ತಮುತ್ತಲಿರುವ ಕಿರಿಯ ಸ್ವಾಮೀಜಿಗಳು, ಆಪ್ತರ ದೂರವಾಣಿ ಸಂಖ್ಯೆಗಳ ಮೇಲೆ ನಿಗಾ ಇಡಲಾಗಿತ್ತು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಯಾರ್‍ಯಾರ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ವರದಿಯನ್ನು ಪೊಲೀಸರು ಈಗಾಗಲೇಸಿಬಿಐಗೆ ಸಲ್ಲಿಸಿದ್ದಾರೆ. ಪೊಲೀಸರ ವರದಿ ಆಧರಿಸಿ ಸಿಬಿಐ ತನಿಖೆ ನಡೆಯುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (ಹಿಂದಿನ ವಿರೋಧ ಪಕ್ಷದ ನಾಯಕ) ಅವರಿಗೆ ನಿಕಟರಾಗಿರುವ ಕೆಲವು ಲಿಂಗಾಯತ ಮಠಾಧೀಶರ ಆಪ್ತರ ದೂರವಾಣಿ ಸಂಖ್ಯೆಗಳೂ ಪೊಲೀಸರ ವರದಿಯಲ್ಲಿವೆ. ಯಾರ್‍ಯಾರ ದೂರವಾಣಿ ಕರೆಗಳನ್ನು ಕದ್ದಾಲಿಸಬೇಕು ಎಂಬುದನ್ನು ಶಕ್ತಿಸೌಧಕ್ಕೆ ಹತ್ತಿರದಲ್ಲಿದ್ದ ಡಿಸಿಪಿ ದರ್ಜೆಯ ಅಧಿಕಾರಿಯೊಬ್ಬರು ನಿರ್ಧರಿಸುತ್ತಿದ್ದರು. ಅವರು ನೀಡಿದ ಸಂಖ್ಯೆಗಳನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗುತಿತ್ತು ಎಂದೂ ಮೂಲಗಳು ತಿಳಿಸಿವೆ.
ಪೊಲೀಸ್ ತಾಂತ್ರಿಕ ವಿಭಾಗಕ್ಕೆ ಕಳುಹಿಸಿದ್ದ ದೂರವಾಣಿ ಸಂಖ್ಯೆಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಆಪ್ತರು, ಆಡಳಿತಪಕ್ಷದ ಶಾಸಕರೂ ಸೇರಿದಂತೆ ಅನೇಕರ ದೂರವಾಣಿ ಸಂಖ್ಯೆಗಳಿದ್ದವು. ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿಯೊಬ್ಬರು 40 ದೂರವಾಣಿ ಸಂಖ್ಯೆಗಳಿಗೆ ಬರುವ ಕರೆಗಳ ಕದ್ದಾಲಿಕೆಗೆ ಶಿಫಾರಸು ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಅವರು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ದೂರವಾಣಿ ಕರೆಗಳ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೈಬರ್ ವಿಭಾಗದ ಮಾಸ್ಟರ್ ಸರ್ವರ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೆಲವು ಮೊಬೈಲ್ ಸೆಟ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದೂ ಗೊತ್ತಾಗಿದೆ.
ಇನ್‌ಸ್ಪೆಕ್ಟರ್, ಎಸಿಪಿಗಳ ವಿಚಾರಣೆ
ಫೋನ್ ಕರೆಗಳ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ದರ್ಜೆಯ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ.
ನಿರ್ದಿಷ್ಟ ಅಧಿಕಾರಿಯೊಬ್ಬರ ಸೂಚನೆ ಮೇಲೆ ದೂರವಾಣಿ ಸಂಬಾಷಣೆಗಳನ್ನು ಕದ್ದಾಲಿಸಲಾಗಿದೆ ಎಂದು ಕೆಲವು ಅಧಿಕಾರಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.