ADVERTISEMENT

ಜಮೀರ್ ವಿರುದ್ಧ ರಾಜ್ಯಪಾಲರಿಗೆ ಅಬ್ರಹಾಂ ಮನವಿ

ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ ಅರ್ಜಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 23:47 IST
Last Updated 21 ಅಕ್ಟೋಬರ್ 2024, 23:47 IST
ಜಮೀರ್‌ ಅಹ್ಮದ್‌ ಖಾನ್‌
ಜಮೀರ್‌ ಅಹ್ಮದ್‌ ಖಾನ್‌   

ಬೆಂಗಳೂರು: ವಸತಿ ಸಚಿವ ಬಿ.ಜೆಡ್. ಜಮೀರ್‌ ಅಹಮದ್ ಖಾನ್‌ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿ ತಾವು ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ನಿರ್ದೇಶನ ನೀಡುವಂತೆ ವಕೀಲ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದರು. ಅದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ರಾಜ್ಯಪಾಲರ ತೀರ್ಮಾನವನ್ನು ಎತ್ತಿಹಿಡಿದಿತ್ತು.

‘ಹೈಕೋರ್ಟ್‌ ತೀರ್ಪು ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿದ್ದ ಜಮೀರ್‌ ಅಹಮದ್, ‘ಇದು ರಾಜಕೀಯ ತೀರ್ಪು’ ಎಂದಿದ್ದರು. ನ್ಯಾಯಾಲಯದ ಘನತೆಗೆ ಕುಂದು ಉಂಟುಮಾಡುವ ರೀತಿಯಲ್ಲಿ ಹಾಗೂ ತೀರ್ಪನ್ನು ರಾಜಕೀಯ ಚಟುವಟಿಕೆಗೆ ಹೋಲಿಸಿರುವ ಜಮೀರ್‌ ಅಹಮದ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು’ ಎಂದು ಕೋರಿ ಅಬ್ರಹಾಂ ಅವರು ಸೆಪ್ಟೆಂಬರ್‌ 26ರಂದು ಅಡ್ವೊಕೇಟ್‌ ಜನರಲ್ ಅವರಿಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ರಾಜಭವನದಲ್ಲಿ ರಾಜ್ಯಪಾಲರನ್ನು ಸೋಮವಾರ ಭೇಟಿಯಾದ ಅಬ್ರಹಾಂ, ‘ನಾನು ಸೆ.26ರಂದು ಅರ್ಜಿ ಸಲ್ಲಿಸಿದ್ದರೂ ಅಡ್ವೊಕೇಟ್‌ ಜನರಲ್‌ ಅವರು ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನ್ಯಾಯಾಂಗ ನಿಂದನೆ ಕೃತ್ಯದಲ್ಲಿ ಭಾಗಿಯಾಗಿರುವ ಜಮೀರ್ ಅಹಮದ್ ಅವರಿಗೆ ರಕ್ಷಣೆ ಒದಗಿಸುವ ದುರುದ್ದೇಶದಿಂದ ನನ್ನ ಅರ್ಜಿಯನ್ನು ಬಾಕಿ ಇರಿಸಿಕೊಂಡಿದ್ದಾರೆ. ತ್ವರಿತವಾಗಿ ಅರ್ಜಿಯನ್ನು ವಿಲೇವಾರಿ ಮಾಡಿ, ಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ನಿರ್ದೇಶನ ನೀಡಬೇಕು’ ಎಂಬ ಮನವಿಯನ್ನು ಸಲ್ಲಿಸಿದರು.

ಎ.ಜಿ. ವಜಾಗೊಳಿಸುವಂತೆಯೂ ಆಗ್ರಹ: ‘ಅಡ್ವೊಕೇಟ್ ಜನರಲ್‌ ಅವರು ನ್ಯಾಯಾಂಗ ನಿಂದನೆಯಲ್ಲಿ ಭಾಗಿಯಾದ ಸಚಿವರನ್ನು ರಕ್ಷಿಸುತ್ತಿದ್ದಾರೆ. ಆದ್ದರಿಂದ ಸಂವಿಧಾನದ 165ನೇ ವಿಧಿಯಡಿ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಅಡ್ವೊಕೇಟ್ ಜನರಲ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಿಬೇಕು’ ಎಂಬ ಬೇಡಿಕೆಯುಳ್ಳ ಪ್ರತ್ಯೇಕ ಮನವಿಯನ್ನೂ ಅವರು ರಾಜ್ಯಪಾಲರಿಗೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.