ಬೆಂಗಳೂರು: ಸಚಿವ ಸಂಪುಟದಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಜಿ ಶಾಸಕ ಎಚ್.ವಿಶ್ವನಾಥ್ ಮತ್ತು ಶಾಸಕ ಡಾ.ಕೆ.ಸುಧಾಕರ್ ನಡುವೆ ಮತ್ತೊಮ್ಮೆ ಮಾತಿನ ಜಟಾಪಟಿ ನಡೆದಿದೆ.
‘ಉಪಚುನಾವಣೆಯಲ್ಲಿ ಸೋತವರು ಕೊಂಚ ತಾಳ್ಮೆ ವಹಿಸಬೇಕು’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ ಬಳಿಕ ಸುಧಾಕರ್ ಅದೇ ಧಾಟಿಯಲ್ಲಿ ಮಾತನಾಡಿರುವ ಬಗ್ಗೆ ಮೈಸೂರಿನಲ್ಲಿ ವಿಶ್ವನಾಥ್ ಕಿಡಿ ಕಾರಿದ್ದಾರೆ.
‘ಮಂತ್ರಿಯಾಗಲು ಸೋತವರಿಗೆ ಕಾನೂನು ಅಡ್ಡಿಯಾಗಲಿದೆ’ ಎಂದು ಡಾ.ಸುಧಾಕರ್ ಅವರು ಸುತ್ತೂರು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಗುರುವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಿಶ್ವನಾಥ್, ‘ಸರ್ಕಾರ ರಚನೆಗೆ ಕಾರಣವಾಗಿರುವ ನಮ್ಮ ಹೋರಾಟಕ್ಕೆ ಗೌರವ ನೀಡಬೇಕು. ನಮ್ಮದು ಹೋರಾಟವೇ ಹೊರತು ಮಾರಾಟವಲ್ಲ. ಇದನ್ನು ಯಡಿಯೂರಪ್ಪ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ಸುಧಾಕರ್ ಡಾಕ್ಟರ್, ಆದರೆ ನಾನು ಲಾಯರ್. ಸುಪ್ರೀಂಕೋರ್ಟ್ ತೀರ್ಪನ್ನು ಓದಿಕೊಂಡಿದ್ದೇನೆ. ಚುನಾವಣೆಗೆ ನಿಂತು ಪವಿತ್ರರಾಗಿ ಬನ್ನಿ ಎಂದು ಹೇಳಿದೆಯೇ ಹೊರತು ಸೋಲು, ಗೆಲುವಿನ ಬಗ್ಗೆ ಹೇಳಿಲ್ಲ. ಸೋತ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಇನ್ನು ನಾವು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ’ ಎಂದು ವಿಶ್ವನಾಥ್ ಪ್ರಶ್ನಿಸಿದರು.
ನಾನೇನು ಎಳೆ ಮಗುನಾ?
ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿರುವ ಸುಧಾಕರ್, ‘ಅವರಿವರ ಮಾತು ಕೇಳಿ ಮಾತನಾಡಲು ನಾನೇನು ಎಳೆ ಮಗುನಾ? ನಾನೂ ಮೂರು ಬಾರಿ ಗೆದ್ದು ಶಾಸಕನಾಗಿರುವೆ. ವೈದ್ಯ ಕೂಡ ಆಗಿರುವೆ. ನಾನು ಪ್ರಪಂಚ ನೋಡಿರುವೆ. ನನಗೆ ಯಾರು ಹೇಳಿ ಕೊಡುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು.
‘ವಿಶ್ವನಾಥ್ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಲ್ಲಿ ನಾನೂ ಒಬ್ಬ. ಬಹಿರಂಗವಾಗಿ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಪ್ರಯೋಜನವಿಲ್ಲ. ಸೂಕ್ತವಾದ ವೇದಿಕೆಯಲ್ಲಿ ಯಾರಿಗೆ ಹೇಗೆ ಹೇಳಬೇಕೋ ಹಾಗೆ ಅರ್ಥ ಮಾಡಿಸೋಣ ಅಂತ ಹೇಳಿದ್ದೆ’ ಎಂದು ಹೇಳಿದರು.
‘ಆದರೆ, ವಿಶ್ವನಾಥ್ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರ ನೋವು ನನಗೆ ಅರ್ಥವಾಗುತ್ತದೆ. ಉಪ ಚುನಾವಣೆಯಲ್ಲಿ ಸೋತಿರುವ ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಅವರ ಜತೆ ಜೀವನ ಪರ್ಯಂತ ಇರುತ್ತೇನೆ’ ಎಂದು ತಿಳಿಸಿದರು.
ಈ ಮಧ್ಯೆ, ‘ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರ ತಾಳ್ಮೆ ಪರೀಕ್ಷೆ ಮಾಡಬೇಡಿ’ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.