ADVERTISEMENT

ಮಾನ್ಯತೆ ಇಲ್ಲದ DCM ಹುದ್ದೆ ಬಗ್ಗೆ ಮಾತನಾಡುವುದು ನಾನ್‌ಸೆನ್ಸ್‌: ರಾಯರೆಡ್ಡಿ

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 10:19 IST
Last Updated 1 ಜುಲೈ 2024, 10:19 IST
<div class="paragraphs"><p>ಬಸವರಾಜ ರಾಯರೆಡ್ಡಿ</p></div>

ಬಸವರಾಜ ರಾಯರೆಡ್ಡಿ

   

ಕಲಬುರಗಿ: ‘ಸಾಂವಿಧಾನಿಕ ಮಾನ್ಯತೆ ಮತ್ತು ಪವರ್ ಇಲ್ಲದ, ವೈಭವೀಕರಣದ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯ ಬಗ್ಗೆ ಮಾತನಾಡುವುದು ನಾನ್‌ಸೆನ್ಸ್‌ (ಅಸಂಬದ್ಧ)’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಿಸಿಎಂ ಕೇವಲ ಗೌರವದ ಹುದ್ದೆ ಹೊರತು ಸಂವಿಧಾನದ ಹುದ್ದೆಯಲ್ಲ. ಜಾತಿಗೆ ಒಬ್ಬರು ಡಿಸಿಎಂ ಮಾಡಬೇಕು ಎಂಬ ಚರ್ಚೆ ಅವಶ್ಯವಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು’ ಎಂದರು.

ADVERTISEMENT

‘ಸಿಎಂ ಬದಲಾವಣೆ ಬಗ್ಗೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದು ಸರಿಯಲ್ಲ. ಸಿಎಂ ಸ್ಥಾನ ಬಿಟ್ಟುಕೊಡಿ ಎನ್ನಲು ಅವರೇನು ಶಾಸಕಾಂಗ ಪಕ್ಷದ ಸದಸ್ಯರಾ? ಪಕ್ಷದ ವರಿಷ್ಠರಾ? ಧಾರ್ಮಿಕ ಮುಖಂಡರಾದವರು ಜನರಿಗೆ ಧರ್ಮದ ಬಗ್ಗೆ ಬೋಧನೆ ಮಾಡಬೇಕು. ಇಲ್ಲದಿದ್ದರೆ ಜನರಲ್ಲಿ ಅವರ ಬಗ್ಗೆ ಅಗೌರವ ಭಾವನೆ ಮೂಡುತ್ತದೆ. ಇದು ಧಾರ್ಮಿಕ ಅಶಿಸ್ತು ತೋರಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮ ಆಡಳಿತಗಾರ. ಅವರನ್ನು ಸಿಎಂ ಸ್ಥಾನದಿಂದ ಇಳಿಸಬಾರದು. ಇನ್ನೂ ನಾಲ್ಕು ವರ್ಷ ಅವರೇ ಸಿಎಂ ಆಗಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ. ಸಾರ್ವಜನಿಕವಾಗಿ ಏನೇ ಚರ್ಚಿಸಿದರೂ ಸಿದ್ದರಾಮಯ್ಯ ಅವರನ್ನು ಇಳಿಸಲು ಆಗುವುದಿಲ್ಲ. ಅದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.

‘ಬೇರೆ– ಬೇರೆ ಜಾತಿಯವರು ನಮ್ಮವರಿಗೆಯೇ ಡಿಸಿಎಂ ಹುದ್ದೆ ಕೊಡಿ ಎನ್ನುವುದು ತಪ್ಪು. ಇಂತಹ ಹುದ್ದೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಜಾತಿವಾರು ಮುಖ್ಯಮಂತ್ರಿ ಮಾಡಿದರೆ ಜನರು ನಮ್ಮ ಪಕ್ಷಕ್ಕೆ ವೋಟ್ ಹಾಕುತ್ತಾರೆ ಎಂದು ಎಲ್ಲ ಪಕ್ಷದವರು ತಿಳಿದುಕೊಂಡಿದ್ದಾರೆ. ಆದರೆ, ಜನರು ಬುದ್ಧಿವಂತರು. ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ. ಸಿಎಂ ಹುದ್ದೆಗೆ ಅರ್ಹತೆಯ ಮಾನದಂಡವಾಗಿ ಇರಿಸಿಕೊಂಡು ಕೇಳಬೇಕು. ಅರ್ಹತೆ ಇಲ್ಲದವರು ಜಾತಿಯ ಹೆಸರು ಪ್ರಸ್ತಾಪಿಸಿ ಹುದ್ದೆ ಕೇಳುವುದು ತಪ್ಪು’ ಎಂದು ಹೇಳಿದರು.

ಕೇಂದ್ರ ಸಚಿವರ ಹಾಗೂ ಬಿಜೆಪಿಯ ಸಂಸದರ ರಾಜ್ಯದಲ್ಲಿ ವಿತ್ತೀಯ ಕೊರತೆ ಹೆಚ್ಚಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಯರೆಡ್ಡಿ, ‘ರಾಜ್ಯದಲ್ಲಿ ಆರ್ಥಿಕ ಅಶಿಸ್ತು ಇಲ್ಲ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಚೌಕಟ್ಟಿನ ಒಳಗೆ ಹಣಕಾಸು ವ್ಯವಸ್ಥೆಯ ನಿರ್ವಹಣೆ ಮಾಡುತ್ತಿದ್ದೇವೆ. ವಿತ್ತೀಯ ಕೊರತೆ ಶೇ 3ರಷ್ಟು ಮೀರಬಾರದು ಎಂಬ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ನಿಯಮವನ್ನು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎರಡು ಬಾರಿ ಮುರಿಯಲಾಗಿತ್ತು. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

‘ರಾಜ್ಯದ ಆಂತರಿಕ ಉತ್ಪನ್ನ ₹26 ಲಕ್ಷ ಕೋಟಿಯಾಗಿದೆ. ಆರ್‌ಬಿಐ ₹1.10 ಲಕ್ಷ ಸಾಲ ತೆಗೆದುಕೊಳ್ಳಲು ರಾಜ್ಯಕ್ಕೆ ಅನುವು ಮಾಡಿಕೊಟ್ಟಿದೆ. ಹೀಗಾಗಿ, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ₹1.05 ಲಕ್ಷ ಕೋಟಿ ಸಾಲ ತೆಗೆದುಕೊಂಡಿದ್ದೇವೆ. ವಿತ್ತೀಯ ಕೊರತೆ ಮಿತಿ ದಾಟುವುದಿಲ್ಲ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಶೇ 5.8ರಷ್ಟಿದೆ. 1952ರಿಂದ 2014ರವರೆಗೆ ದೇಶದ ಸಾಲ ₹52 ಲಕ್ಷ ಕೋಟಿಯಷ್ಟಿತ್ತು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಆಂತರಿಕ ಮತ್ತು ಬಾಹ್ಯವಾಗಿ ₹130 ಲಕ್ಷ ಕೋಟಿ ಸಾಲ ಮಾಡಿದೆ. ದೇಶದ ಒಟ್ಟಾರೆ ಸಾಲದ ಪ್ರಮಾಣ ₹180 ಲಕ್ಷ ಕೋಟಿಯಷ್ಟಾಗಿದೆ. ಇದು ಮೋದಿ ಸರ್ಕಾರದ ಅಶಿಸ್ತು ತೋರಿಸುತ್ತದೆ. ಬಿಜೆಪಿಗರು ಇದರ ಬಗ್ಗೆ ಮಾತನಾಡಲಿ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.