ADVERTISEMENT

ಶಿವನಸಮುದ್ರದಲ್ಲಿ ತಮಿಳುನಾಡು ಪ್ರೇಮಿಗಳ ಮರ್ಯಾದೆಗೇಡು ಹತ್ಯೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 13:08 IST
Last Updated 16 ನವೆಂಬರ್ 2018, 13:08 IST
   

ಮಂಡ್ಯ: ಪ್ರೀತಿಸಿ ವಿವಾಹವಾಗಿದ್ದ ತಮಿಳುನಾಡಿನ ಯುವ ದಂಪತಿಯನ್ನು ಬಲವಂತವಾಗಿ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿಗೆ ಕರೆತಂದು ಕೊಲೆ ಮಾಡಿ ಶವಗಳನ್ನು ಎಸ್‌ಬಿಆರ್‌ ಕೆರೆಗೆ ಬಿಸಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೊಂದು ಮರ್ಯಾದೆಗೇಡು ಹತ್ಯೆ ಎಂದು ಪತ್ತೆಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣಗಿರಿ ಜಿಲ್ಲೆ, ಹೊಸೂರು ತಾಲ್ಲೂಕು ಚೂಡಗೌಂಡನಹಳ್ಳಿ ಗ್ರಾಮದ ನಂದೀಶ್‌ (26), ಅದೇ ಗ್ರಾಮದ ಸ್ವಾತಿ (19) ಕೊಲೆಯಾದ ದಂಪತಿ. ನ.15ರಂದು ದಂಪತಿಯ ಶವಗಳು ಶಿವನಸಮುದ್ರದ ಬಳಿ ಕೆರೆಯಲ್ಲಿ ಪತ್ತೆಯಾಗಿದ್ದವು.

ADVERTISEMENT

ತನಿಖೆ ನಡೆಸಿದ ಪೊಲೀಸರು ತಮಿಳುನಾಡಿಗೆ ತೆರಳಿದಾಗ ಯುವತಿ ಪೋಷಕರೇ ಇಬ್ಬರನ್ನೂ ಕೊಲೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ. ಘಟನೆ ಸಂಬಂಧ ಯುವತಿಯ ತಂದೆ ಶ್ರೀನಿವಾಸ್, ದೊಡ್ಡಪ್ಪ ವೆಂಕಟೇಶ್, ಮತ್ತೊಬ್ಬ ಸಂಬಂಧಿ ಅಶ್ವಥ್ ಅವರನ್ನು ಬಂಧಿಸಿ ಶುಕ್ರವಾರ ಮಳವಳ್ಳಿಗೆ ಕರೆತಂದಿದ್ದಾರೆ.

ಎಸ್‌ಸಿ ಸಮುದಾಯಕ್ಕೆ ಸೇರಿದ, ಹಾರ್ಡ್‌ವೇರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್‌ ಹಾಗೂ ಹಿಂದುಳಿದ ವರ್ಗದ, ಬಿ.ಕಾಂ ಓದುತ್ತಿದ್ದ ಸ್ವಾತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ಮೂರು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ನಂತರ ದಂಪತಿ ನಾಪತ್ತೆಯಾಗಿದ್ದರು. ನ.11ರಂದು ದಂಪತಿ ಹೊಸೂರಿನಲ್ಲಿ ಪತ್ತೆಯಾಗಿದ್ದರು. ಸ್ವಾತಿಯ ಸಂಬಂಧಿ ಕೃಷ್ಣ ಎಂಬಾತ ಇವರನ್ನು ನೋಡಿ ಆಕೆಯ ಸಂಬಂಧಿ ಅಶ್ವಥ್‌ಗೆ ಮಾಹಿತಿ ನೀಡಿದ್ದರು. ನಂತರ ಯುವತಿಯ ಕುಟುಂಬ ಹೊಸೂರಿಗೆ ತೆರಳಿ ದಂಪತಿಯನ್ನು ಭೇಟಿ ಮಾಡಿದರು.

ಪೊಲೀಸ್‌ ಠಾಣೆಗೆ ತೆರಳಿ ಸಮಸ್ಯೆ ಸರಿಪಡಿಸಿಕೊಳ್ಳೋಣ ಎಂದು ನಂಬಿಸಿ ದಂಪತಿಯನ್ನು ಟಾಟಾ ಸುಮೊಗೆ ಹತ್ತಿಸಿಕೊಂಡರು. ವಾಹನ ಹೊಸೂರು ದಾಟಿ ನೈಸ್‌ ರಸ್ತೆ ಕಡೆಗೆ ಬರುತ್ತಿದ್ದಂತೆ ಸ್ವಾತಿಗೆ ಅನುಮಾನ ಬಂದಿದೆ. ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ ಎಂದು ಕೇಳಿದಾಗ, ಹನುಮಂತನ ದೇವಸ್ಥಾನಕ್ಕೆ ಕರೆದೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದರು. ಶಿವನಸಮುದ್ರಕ್ಕೆ ಕರೆತಂದು ಇಬ್ಬರ ಕೈಕಾಲುಗಳನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ನಂತರ ಕೊಲೆ ಮಾಡಿ ಸಮೀಪದಲ್ಲೇ ಇದ್ದ ಎಸ್‌ಬಿಆರ್‌ ಕೆರೆಗೆ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳನ್ನು ಮಳವಳ್ಳಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೊಂದು ಮರ್ಯಾದೆಗೇಡು ಹತ್ಯೆ ಎಂಬುದು ಖಾತ್ರಿಯಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಹೇಳಿದರು. ಬೆಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ದಿನದಲ್ಲಿ ಪತ್ತೆ: ಘಟನೆ ನಡೆದ ಎರಡು ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸರ್ಕಲ್ ಇನ್‌ಸ್ಪೆಕ್ಟರ್‌ ಶ್ರೀಕಾಂತ್ ನೇತೃತ್ವದಲ್ಲಿ ಸಿಬ್ಬಂದಿ ಪ್ರಭು, ರಿಯಾಜ್, ಮಹಾದೇವು, ಸುಬ್ರಮಣ್ಯ, ರಾಜಣ್ಣ ತಂಡ ತಮಿಳುನಾಡಿಗೆ ತೆರಳಿದ್ದರು.

ಯುವಕ ತೊಟ್ಟಿದ್ದ ಅಂಬೇಡ್ಕರ್‌ ಭಾವಚಿತ್ರವುಳ್ಳ ಟೀ ಶರ್ಟ್‌ ಹಾಗೂ ಜೇಬಿನಲ್ಲಿದ್ದ ದಾಖಲೆಗಳು ತನಿಖೆಗೆ ನೆರವಾದವು. ತಮಿಳುನಾಡಿನಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ನೆರವಿನಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.