ADVERTISEMENT

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ತಾರಾ ನೇಮಕ: ವಿವಾದ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:01 IST
Last Updated 20 ಜನವರಿ 2020, 20:01 IST
ತಾರಾ ಅನೂರಾಧಾ
ತಾರಾ ಅನೂರಾಧಾ   

ಬೆಂಗಳೂರು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನೂರಾಧಾ ಅವರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಆಯೋಗದ ಅಧ್ಯಕ್ಷರನ್ನಾಗಿ ಡಾ.ಅಂತೋಣಿ ಸೆಬಾಸ್ಟಿಯನ್ ಅವರನ್ನು ನೇಮಕ ಮಾಡಿದ್ದು, ಅವರ ಅಧಿಕಾರ ಅವಧಿ ಮೂರು ವರ್ಷಗಳು. ಅದಕ್ಕೂ ಮುನ್ನ ಅಧ್ಯಕ್ಷರನ್ನು ಬದಲಾವಣೆ ಮಾಡಲು ನಿಯಮದಲ್ಲಿ ಅವಕಾಶ ಇಲ್ಲ. ಅವರೇ ರಾಜೀನಾಮೆ ನೀಡಿದರೆ ಮಾತ್ರ ಹೊಸಬರನ್ನು ನೇಮಕ ಮಾಡಬಹುದು.

ಆದರೆ ಸೆಬಾಸ್ಟಿಯನ್ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನವೇ ತಾರಾ ಅವರ ನೇಮಕಕ್ಕೆ ಮುಖ್ಯಮಂತ್ರಿ ಆದೇಶ ಮಾಡಿರುವುದು ಗೊಂದಲಕ್ಕೆ ಸಿಲುಕಿದೆ. ತಾರಾ ಜತೆಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶೃತಿ ಅವರ ನೇಮಕಕ್ಕೂ ಜ. 1ರಂದು ಆದೇಶಿಸಿದ್ದರು. ಈಗ ಶೃತಿ ಅವರನ್ನು ನೇಮಕ ಮಾಡಲಾಗಿದೆ.

ADVERTISEMENT

ತಾರಾ ನೇಮಕಕ್ಕೆ ಆದೇಶಿಸಿಯಡಿಯೂರಪ್ಪ ಬರೆದ ಪತ್ರವನ್ನುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಪರಿಶೀಲನೆ ನಡೆಸಿದ್ದಾರೆ. ‘ಈಗಾಗಲೇ ಅಧ್ಯಕ್ಷರಾಗಿ ಅಂತೋಣಿ ಸೆಬಾಸ್ಟಿಯನ್ ಕಾರ್ಯನಿರ್ವಹಿಸುತ್ತಿದ್ದು, ಅವರ ಅಧಿಕಾರ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ತಾರಾ ಅವರನ್ನು ನೇಮಕ ಮಾಡಲು ಸಾಧ್ಯವಿಲ್ಲ’ ಎಂದು ಕಡತವನ್ನು ಮುಖ್ಯಮಂತ್ರಿ ಕಚೇರಿಗೆ ವಾಪಸ್ ಕಳುಹಿಸಿದ್ದಾರೆ.

‘ಆಯೋಗದ ಅಧ್ಯಕ್ಷರ ಹುದ್ದೆ ಖಾಲಿ ಇರಬಹುದು ಎಂಬ ಕಾರಣಕ್ಕೆ ನೇಮಕ ಮಾಡುವಂತೆ ಮುಖ್ಯಮಂತ್ರಿ ಆದೇಶಿಸಿರಬಹುದು. ವಾಸ್ತವ ಸ್ಥಿತಿಯನ್ನು ನಮೂದಿಸಿ ಕಡತವನ್ನು ಮುಖ್ಯಮಂತ್ರಿ ಕಚೇರಿಗೆ ವಾಪಸ್ ಕಳುಹಿಸಲಾಗಿದೆ’ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

*
ತಾಂತ್ರಿಕ ಸಮಸ್ಯೆಯಿಂದಾಗಿ ನನ್ನ ನೇಮಕ ಆಗಿಲ್ಲ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರು ಸೂಕ್ತ ಸ್ಥಾನಮಾನ ನೀಡುತ್ತಾರೆ.
-ತಾರಾ ಅನೂರಾಧಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.