ADVERTISEMENT

ಮಾದಕ ವಸ್ತು ಜಾಲ ನಿಯಂತ್ರಣಕ್ಕೆ ಗೃಹ ಸಚಿವರ ಅಧ್ಯಕ್ಷತೆಯ ಕಾರ್ಯಪಡೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 11:05 IST
Last Updated 18 ಸೆಪ್ಟೆಂಬರ್ 2024, 11:05 IST
siddaramaiah
siddaramaiah   

ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತು ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಲು ಗೃಹ ಸಚಿವ ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಚಿವರು, ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಆರೋಗ್ಯ, ವೈದ್ಯಕೀಯ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆಯ ಸಚಿವರು ಕಾರ್ಯಪಡೆ ಸದಸ್ಯರಾಗಿರುತ್ತಾರೆ. ಈ ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಮಾದಕವಸ್ತು  ಪೂರೈಕೆ, ಮಾರಾಟ, ಸೇವನೆ ಪ್ರಕರಣಗಳ ಕುರಿತು ಅವಲೋಕನ ನಡೆಸಲಿದೆ. ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ ಎಂದರು.

ಇದುವರೆಗೂ ಅಧಿಕಾರಿಗಳ ನೇತೃತ್ವದಲ್ಲಿ ಮಾದಕವಸ್ತು ಜಾಲದ ಮೇಲೆ ನಿಗಾ ಇಡಲಾಗುತ್ತಿತ್ತು. ಇದೇ ಮೊದಲ ಬಾರಿ ಸಚಿವ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುತ್ತಿದೆ. ಪ್ರತಿ ಠಾಣೆಯ ಠಾಣಾಧಿಕಾರಿಗೆ ಹೊಣೆ ನಿಗದಿ ಮಾಡಲಾಗುತ್ತದೆ. ಹೊಣೆ ನಿಭಾಯಿಸದ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾ ಸಮಿತಿಗಳನ್ನೂ ಸಕ್ರಿಯಗೊಳಿಸಲಾಗುತ್ತದೆ ಎಂದರು.

ADVERTISEMENT

ಮಾದಕ ವಸ್ತು ಜಾಲದ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಶೇ 50ರಷ್ಟು ಬೆಂಗಳೂರು ಹಾಗೂ ಶೇ 22ರಷ್ಟು ಮಂಗಳೂರಿನಲ್ಲಿ ವರದಿಯಾಗಿವೆ. ಉಳಿದ ಶೇ 28ರಷ್ಟು ಪ್ರಕರಣಗಳು ರಾಜ್ಯದ ಇತರೆ ಜಿಲ್ಲೆಗಳಲ್ಲಿ ದಾಖಲಾಗಿವೆ. ಬೆಂಗಳೂರು ಪೂರ್ವ ವಲಯ ದಂಧೆಯ ತಾಣವಾಗಿದೆ ಎಂದು ಮಾಹಿತಿ ನೀಡಿದರು.

ಅಗತ್ಯಬಿದ್ದರೆ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಮಾದಕ ವಸ್ತು ಪೂರೈಕೆ ಮಾಡುವವರಿಗೆ ಕನಿಷ್ಠ 10 ವರ್ಷಗಳ ಶಿಕ್ಷೆ ಅಥವಾ ಜೀವಮಾನ ಶಿಕ್ಷೆ ನಿಗದಿ ಮಾಡಲು ತಿದ್ದುಪಡಿ ತರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.