ADVERTISEMENT

ದೆಹಲಿಯಲ್ಲಿ ‘ನಂದಿನಿ’ ಸವಿರುಚಿ: ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ರಾಜ್ಯದ ಹಾಲು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:28 IST
Last Updated 21 ನವೆಂಬರ್ 2024, 15:28 IST
<div class="paragraphs"><p>ಸಿದ್ದರಾಮಯ್ಯ ಅವರು ಹಾಲಿನ ಉತ್ಪನ್ನ ಬಿಡುಗಡೆ ಮಾಡಿದರು. </p></div>

ಸಿದ್ದರಾಮಯ್ಯ ಅವರು ಹಾಲಿನ ಉತ್ಪನ್ನ ಬಿಡುಗಡೆ ಮಾಡಿದರು.

   

ನವದೆಹಲಿ: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ (ಕೆಎಂಎಫ್‌) ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವತಿಯಿಂದ ‘ನಂದಿನಿ’ ವಿವಿಧ ಶ್ರೇಣಿಯ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟಕ್ಕೆ ನವದೆಹಲಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಪ್ರಸ್ತುತ ದೆಹಲಿ ಮಾರುಕಟ್ಟೆಯಲ್ಲಿರುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್ಎಲ್‌) ಅಮುಲ್ ಹಾಗೂ ಮದರ್‌ ಡೇರಿ ಹಾಲಿಗಿಂತ ನಂದಿನಿ ಹಾಲಿನ ದರವನ್ನು ಕೆಎಂಎಫ್‌ ಸ್ವಲ್ಪ ಕಡಿಮೆ ಇರಿಸಿದೆ. 

ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ ಆರಂಭಿಕ ಹಂತದಲ್ಲಿ ಪ್ರತಿದಿನ 2.5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದೆಹಲಿ ಬಹುದೊಡ್ಡ ಮಾರುಕಟ್ಟೆ. ಇಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ವ್ಯಾಪಕ ಅವಕಾಶ ಇದೆ. ಕೆಲವೇ ತಿಂಗಳಲ್ಲಿ ಹಾಲಿನ ಮಾರಾಟವನ್ನು 5 ಲಕ್ಷ ಲೀಟರ್‌ಗೆ ಏರಿಸಬೇಕು’ ಎಂದು ಸೂಚಿಸಿದರು. 

‘ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ’ ಎಂದು ಅವರು ತಿಳಿಸಿದರು. 

‘ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್‌ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘ ಪ್ರಾರಂಭಿಸಿದರು’ ಎಂದರು.

‘ಹಿಂದೆ ಪಶುಸಂಗೋಪನಾ ಸಚಿವನಾಗಿದ್ದು, ಒಂದು ವರ್ಷ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ’ ಎಂದು ಸ್ಮರಿಸಿದ ಅವರು, ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಯಿತು’ ಎಂದರು.

‘ರಾಜ್ಯದಲ್ಲಿ ಒಟ್ಟು 16 ಜಿಲ್ಲಾ ಹಾಲು ಒಕ್ಕೂಟಗಳಿವೆ. ರಾಜ್ಯದಲ್ಲಿ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ’ ಎಂದರು. 

‘ಕರ್ನಾಟಕದಿಂದ ದೆಹಲಿಗೆ ಸಾಗಣೆ ಮಾಡುವ ಸಮಯದಲ್ಲಿ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಭರವಸೆ ನೀಡಿದರು.

ಹಾಲು ಮಾರಾಟಕ್ಕಾಗಿ ಒಕ್ಕೂಟವು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ 100 ವಿತರಕರೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದರು. 

ಸಹಕಾರ ಇಲಾಖೆಯ ‍ಪ್ರಧಾನ ಕಾರ್ಯದರ್ಶಿ ಅಜಯ್‌ ನಾಗಭೂಷಣ್ ಮಾತನಾಡಿ, ‘ರಾಜಧಾನಿಯಲ್ಲಿ ಸುಮಾರು 20 ಸಾವಿರ ಕನ್ನಡಿಗರು ಇದ್ದಾರೆ. ತಮಿಳುನಾಡು ಹಾಗೂ ಕೇರಳದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಂದಿನಿ ಹಾಲಿನ ಬಗ್ಗೆ ಇಲ್ಲಿನ ಕನ್ನಡಿಗರು ಪ್ರಚಾರ ಮಾಡಬೇಕು. ಈ ಮೂಲಕ ಮಾರಾಟ ಹೆಚ್ಚಳಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು. 

ದೆಹಲಿಯಲ್ಲಿ ದರವೆಷ್ಟು? (ಲೀಟರ್‌ಗೆ) 

ಹಸುವಿನ ಹಾಲು; ₹56

ಪೂರ್ಣ ಕೆನೆ ಹಾಲು; ₹67

ಸ್ಟಾಂಡರ್ಡೈಸ್ಡ್ ಹಾಲು; ₹61

ಟೋನ್ಡ್ ಹಾಲು; ₹55

ಮೊಸರು ಕೆ.ಜಿಗೆ ₹74

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.