ADVERTISEMENT

‘ತೌಕ್ತೆ’ ತೀವ್ರ: ಹಾನಿ ತಡೆಗೆ ಸಿದ್ಧತೆ, ಕೇರಳ, ಕರ್ನಾಟಕ ಕರಾವಳಿಯಲ್ಲಿ ಭಾರಿ ಮಳೆ

ಪಿಟಿಐ
Published 15 ಮೇ 2021, 20:07 IST
Last Updated 15 ಮೇ 2021, 20:07 IST
ಕೇರಳದ ತಿರುವನಂತಪುರದಲ್ಲಿ ‘ತೌಕ್ತೆ’ ಚಂಡಮಾರುತದ ಪರಿಣಾಮ ಶನಿವಾರ ಅರಬ್ಬಿ ಸಮುದ್ರದ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸಿದವು –ಪಿಟಿಐ ಚಿತ್ರ
ಕೇರಳದ ತಿರುವನಂತಪುರದಲ್ಲಿ ‘ತೌಕ್ತೆ’ ಚಂಡಮಾರುತದ ಪರಿಣಾಮ ಶನಿವಾರ ಅರಬ್ಬಿ ಸಮುದ್ರದ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸಿದವು –ಪಿಟಿಐ ಚಿತ್ರ   

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತವು ‘ತೌಕ್ತೆ’ ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಇದು ಮಂಗಳವಾರದ ಹೊತ್ತಿಗೆ ಪೋರ್‌ ಬಂದರ್‌ ಮತ್ತು ನಲಿಯಾ ನಡುವೆ ಗುಜರಾತ್‌ ಕರಾವಳಿ, ಕೇಂದ್ರಾಡಳಿತ ಪ್ರದೇಶಗಳಾದ ದಮನ್‌–ದಿಯು ಮತ್ತು ದಾದ್ರಾ–ನಗರ್‌ಹವೇಲಿಯನ್ನು ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

ಚಂಡಮಾರುತದಿಂದಾಗಿ ಮುಂಬೈ ಸುತ್ತಮುತ್ತ ಮಳೆಯಾಗುವ ಸಾಧ್ಯತೆ ಇದೆ. ಆದರೆ, ನಗರಕ್ಕೆ ಹೆಚ್ಚಿನ ಸಮಸ್ಯೆ ಆಗದು ಎಂದು ಇಲಾಖೆ ಹೇಳಿದೆ.

ಶನಿವಾರದಿಂದ ಮಂಗಳವಾರದವರೆಗೆ ‘ತೌಕ್ತೆ’ ಅತಿ ಹೆಚ್ಚಿನ ತೀವ್ರತೆ ಹೊಂದಿರುತ್ತದೆ.

ADVERTISEMENT

ಕಳೆದ ಕೆಲವು ದಿನಗಳಿಂದ ರೂಪುಗೊಂಡ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಕೇಂದ್ರ ಮತ್ತು ಕರಾವಳಿ ರಾಜ್ಯಗಳ ಸರ್ಕಾರಗಳು ಸಿದ್ಧತೆ ನಡೆಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 53 ತಂಡಗಳನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಮೊದಲು ನಿಯೋಜಿಸಲಾಗಿತ್ತು. ಈ ಸಂಖ್ಯೆಯನ್ನು ಈಗ ನೂರಕ್ಕೆ ಏರಿಸಲಾಗಿದೆ. ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‌ಕೇರಳದ ಮಧ್ಯ ಮತ್ತು ಉತ್ತರ ಭಾಗಗಳು ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಜಲ ಆಯೋಗವು ಸೂಚನೆ ನೀಡಿದೆ.

ಕೇರಳದ ಮಲಪ್ಪುರಂ, ಕೋಯಿಕ್ಕೋಡ್‌, ವಯನಾಡ್‌, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮಧ್ಯ ಕೇರಳದ ಕೆಲವು ಜಿಲ್ಲೆಗಳಲ್ಲಿಯೂ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಲವು ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ಸಮೀಪದಲ್ಲಿ ನೆಲೆಸಿರುವ ಜನರಿಗೆ ಎಚ್ಚರಿಕೆ ಕೊಡಲಾಗಿದೆ. ಹಲವು ಮನೆಗಳು ಹಾನಿಗೊಂಡಿವೆ, ಹತ್ತಾರು ಮರಗಳು ಉರುಳಿವೆ ಮತ್ತು ವಿದ್ಯುತ್‌ ಸರಬರಾಜು
ವ್ಯತ್ಯಯವಾಗಿದೆ.

ಗೋವಾದಲ್ಲಿ ಕೂಡ ಪರಿಸ್ಥಿತಿ ನಿಭಾಯಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ.ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಭಾನುವಾರವೂ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗೋವಾದ ಅಗ್ನಿಶಾಮಕ ದಳವನ್ನು ಸನ್ನದ್ಧವಾಗಿ ಇರಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಎಚ್ಚರಿಕೆ ವಹಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಪಾಲ್ಘರ್‌ ಜಿಲ್ಲೆಯ 97 ಮೀನುಗಾರಿಕಾ ದೋಣಿಗಳು ಇನ್ನಷ್ಟೇ ದಡಕ್ಕೆ ಮರಳಬೇಕಿವೆ. ಇವು ನಡುಕಡಲಿನಲ್ಲಿ ಇವೆ ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇಲ್ಲಿನ ಕರಾವಳಿಯಿಂದ 512 ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಅವುಗಳ‍ಪೈಕಿ 415 ದೋಣಿಗಳು ಮರಳಿವೆ.

ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟದ ಮೇಲೆ ನಿಗಾ ಇರಿಸುವಂತೆ ಹಾಗೂ ಜನರ ಸುರಕ್ಷತೆಯನ್ನು ಖಾತರಿಪಡಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕನ್ಯಾಕುಮಾರಿ, ತಿರುನೆಲ್ವೇಲಿ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಶನಿವಾರ ಮಳೆಯಾಗಿದೆ. ಕನ್ಯಾಕುಮಾರಿ ಮತ್ತು ತಿರುನೆಲ್ವೇಲಿ ಜಿಲ್ಲೆಗಳ ಹಲವೆಡೆ ನೀರು ನಿಂತು ಸಮಸ್ಯೆಯಾಗಿದೆ.

ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ: ಕೋವಿಡ್‌ ಆಸ್ಪತ್ರೆಗಳು, ಲಸಿಕೆ ಶೀಥಲೀಕರಣ ಗೃಹಗಳು ಮತ್ತು ಅಗತ್ಯ ಔಷಧ ಸಂಗ್ರಹಕ್ಕೆಚಂಡಮಾರುತದಿಂದಾಗಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ. ಚಂಡಮಾರುತಕ್ಕೆ ಸಂಬಂಧಿಸಿ ಉನ್ನತ ಮಟ್ಟದ ಸಭೆಯನ್ನು ಅವರು ಶನಿವಾರ ನಡೆಸಿದರು.

ತೊಂದರೆಗೆ ಒಳಗಾಗುವ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ತೆರವು ಮಾಡಬೇಕು, ವಿದ್ಯುತ್‌, ದೂರವಾಣಿ, ಆರೋಗ್ಯ ಮತ್ತು ಕುಡಿಯುವ ನೀರಿನಂತಹ ಅಗತ್ಯ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ರಾಜ್ಯಗಳು ಮತ್ತು ಕೇಂದ್ರದ ಸಚಿವಾಲಯಗಳ ಸನ್ನದ್ಧತೆಯನ್ನು ಅವರು ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.