ADVERTISEMENT

ತೆರಿಗೆ: 2019–20ನೇ ಆರ್ಥಿಕ ವರ್ಷದಲ್ಲಿ ₹2,491 ಕೋಟಿ ನಷ್ಟ -ಸಿಎಜಿ ವರದಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 20:55 IST
Last Updated 22 ಸೆಪ್ಟೆಂಬರ್ 2021, 20:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: 2019–20ನೇ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳಲ್ಲಿ ₹2,491.66 ಕೋಟಿಯಷ್ಟು ಕಡಿಮೆ ಪ್ರಮಾಣದಲ್ಲಿರಾಜಸ್ವ ಅಂದಾಜು ಮಾಡಿದ್ದರಿಂದ ವರಮಾನ ಸಂಗ್ರಹದಲ್ಲಿ ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಸಾರಿಗೆ ಇಲಾಖೆಯ 254 ಘಟಕ/ ಕಚೇರಿಗಳಲ್ಲಿ ಲೆಕ್ಕಪರಿಶೋಧನೆ ನಡೆಸಲಾಗಿದೆ. ಈ ವ್ಯಾಪ್ತಿಯಲ್ಲಿ ತೆರಿಗೆ, ಶುಲ್ಕ ಮತ್ತು ರಾಜಸ್ವ ನಿರ್ಧರಿಸುವಲ್ಲಿ ಆಗಿರುವ ತಪ್ಪುಗಳಿಂದಾಗಿ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಸಿಎಜಿ ತಿಳಿಸಿದೆ.

ಮಾರ್ಚ್–2020ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಅನುಪಾಲನಾ ಲೆಕ್ಕಪರಿಶೋಧನೆ ವರದಿಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು. 2019–20ನೇ ಹಣಕಾಸು ವರ್ಷದಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಆಗಿರುವ ಹಲವು ಲೋಪಗಳನ್ನು ಈ ವರದಿ ಬಹಿರಂಗಪಡಿಸಿದೆ.

ADVERTISEMENT

ಎರಡು ಉಪ ನೋಂದಣಿ ಅಧಿಕಾರಿಗಳ ಕಚೇರಿಗಳಲ್ಲಿ ಗುತ್ತಿಗೆ ದಸ್ತಾವೇಜು, ಮಾರಾಟ– ಒಡಂಬಡಿಕೆಗಳು ಮತ್ತು ವ್ಯವಹಾರಾಧಿಕಾರಗಳನ್ನು ತಪ್ಪಾಗಿ ವರ್ಗೀಕರಿಸಿದ್ದರಿಂದ ಆರು ಪ್ರಕರಣಗಳಲ್ಲಿ ₹22.83 ಕೋಟಿ ಮೊತ್ತದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿದೆ ಎಂದು ವರದಿ ಬೊಟ್ಟು ಮಾಡಿದೆ.

ಅಲ್ಲದೆ, ವ್ಯವಹಾರಾಧಿಕಾರ ಕಡೆಗಣಿಸಿರುವುದು, ಕಟ್ಟಡಗಳು, ಸ್ಥಾವರ ಮತ್ತು ಯಂತ್ರಗಳ ಇರುವಿಕೆ ಸ್ಪಷ್ಟಪಡಿಸದ ಕಾರಣ, 13 ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ 25 ಪ್ರಕರಣಗಳಲ್ಲಿ ₹10.14 ಕೋಟಿಯಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿದೆ. 9 ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ 62 ಜಂಟಿ ಅಭಿವೃದ್ಧಿ ಒಡಂಬಡಿಕೆಗಳಲ್ಲಿ ಅಸಮರ್ಪಕ ಮಾಹಿತಿ ಆಧಾರದ ಮೇರೆಗೆ ತಪ್ಪು ದರಗಳನ್ನು ಅಳವಡಿಸಿಕೊಂಡಿದ್ದರಿಂದ ₹ 6.59 ಕೋಟಿಯಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಸಂಗ್ರಹ ಕಡಿಮೆ ಆಗಿದೆ ಎಂದು ಹೇಳಿದೆ.

ದಂಡ ವಿಧಿಸದೆ ನಷ್ಟ: ಕರದಾತರು ತಡವಾಗಿತೆರಿಗೆ ಪಾವತಿಸಿದ್ದಕ್ಕಾಗಿ ವಿವಿಧ ನಿಯಮಗಳಡಿ ₹32.72 ಕೋಟಿ ದಂಡ ವಿಧಿಸಬೇಕಾಗಿತ್ತು, ದಂಡ ವಿಧಿಸದೇ ನಷ್ಟ ಉಂಟು ಮಾಡಲಾಗಿದೆ. ಅಲ್ಲದೆ, ನಗರ ಪ್ರದೇಶಗಳಲ್ಲಿ 30 ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮಾರ್ಚ್‌ 2014 ರಿಂದ ಮಾರ್ಚ್‌ 2017 ರ ಅವಧಿಯಲ್ಲಿ ಮದ್ಯ ಮಾರಾಟದ ಮೇಲೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ಮತ್ತು ದಂಡ ವಿಧಿಸಲಾಗಿತ್ತು. ಇದರ ಮೊತ್ತ ₹6.15 ಕೋಟಿ ಆಗಿದೆ.

ಕಾರ್ಮಿಕ ಇಲಾಖೆಯು ನೋಂದಣಿ/ನವೀಕರಣದ ಪರಿಷ್ಕೃತ ದರಗಳನ್ನು ಜಾರಿಗೊಳಿಸದೇ ಅಂಗಡಿ ಮತ್ತು ವಾಣಿಜ್ಯಸಂಸ್ಥೆಗಳ ನೋಂದಣಿ ನವೀಕರಿಸಿರುವುದರಿಂದ ₹39.59 ಕೋಟಿಯಷ್ಟು ನಷ್ಟವಾಗಿದೆ. ತಡವಾಗಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಮುಖ್ಯ ಎಂಜಿನಿಯರ್‌ ಅತ್ಯಲ್ಪ ದಂಡ ವಿಧಿಸಿದ್ದಾರೆ. ಇದರಿಂದ ₹14.63 ಕೋಟಿಯಷ್ಟು ಕಡಿಮೆ ದಂಡ ವಿಧಿಸಿರುವುದರ ಜತೆಗೆ ಗುತ್ತಿಗೆದಾರರಿಗೆ ಅನುಚಿತ ರೂಪದಲ್ಲಿ ಲಾಭ ಮಾಡಿಕೊಟ್ಟಿರುವುದು ಕಂಡುಬಂದಿದೆ ಎಂದು ಸಿಎಜಿ ವರದಿ ಹೇಳಿದೆ.

ಬೆಂಗಳೂರು ವಿ.ವಿ ಯಲ್ಲಿ ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದ ₹12.97 ಲಕ್ಷ ದುರುಪಯೋಗವಾ ಗಿದೆ. ದಾಖಲೆಗಳ ತಿರುಚುವಿಕೆ ಮತ್ತು ಸಂಶಯಾಸ್ಪದ ದುರುಪಯೋಗದಿಂದ ₹1.28ಲಕ್ಷ ಮತ್ತು ₹87.87ಲಕ್ಷ ಆದಾಯದಲ್ಲಿ ನಷ್ಟವಾಗಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.