ADVERTISEMENT

ಟ್ಯಾಕ್ಸಿ ಸಂಘದ ಅರ್ಜಿ: ಕೇಂದ್ರ–ರಾಜ್ಯಕ್ಕೆ ಹೈಕೋರ್ಟ್ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 0:06 IST
Last Updated 26 ನವೆಂಬರ್ 2024, 0:06 IST
<div class="paragraphs"><p>ಕರ್ನಾಟಕ ಹೈಕೋರ್ಟ್ </p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ‘ವಾಹನಗಳ ಮೇಲಿನ ನಿಗಾ ವ್ಯವಸ್ಥೆ (ಟ್ರ್ಯಾಕಿಂಗ್ ಸಿಸ್ಟಂ) ಹಾಗೂ ಅಪಾಯ ಸೂಚನಾ ಒತ್ತುಗುಂಡಿ (ಪ್ಯಾನಿಕ್ ಬಟನ್) ಅಳವಡಿಸದೇ ಇದ್ದರೆ ವಾಹನ ಸದೃಢ (ಫಿಟ್ನೆಸ್‌) ಪ್ರಮಾಣಪತ್ರ ನವೀಕರಿಸಬಾರದು’ ಎಂಬ ರಾಜ್ಯ ಸಾರಿಗೆ ಇಲಾಖೆಯ ಆದೇಶ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.‌

ಈ ಸಂಬಂಧ ‘ಬೆಂಗಳೂರು ಪ್ರವಾಸಿಗರ ಟ್ಯಾಕ್ಸಿ ಮಾಲೀಕರ ಸಂಘ’ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಬಿ.ಆರ್.ಸುಂದರ್ ರಾಜ್ ಗುಪ್ತ ಅವರ ವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರದ ಅಧಿಸೂಚನೆ‌ಗೆ ಏಕಾಏಕಿ ತಡೆ ನೀಡಲು‌ ಆಗುವುದಿಲ್ಲ. ಸರ್ಕಾರಕ್ಕೆ ನೋಟಿಸ್ ಜಾರಿಯಾಗಲಿ. ಅವರು ಆಕ್ಷೇಪಣೆ ಸಲ್ಲಿಸಲಿ. ನಂತರ ಮಧ್ಯಂತರ ಮನವಿ ಪರಿಗಣಿಸಲಾಗುವುದು’ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಪ್ರತಿವಾದಿಗಳಾದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಾರಿಗೆ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಾರಿಗೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.