ಬೆಂಗಳೂರು: 'ಸಚಿವ ಸ್ಥಾನ ಸಿಗುವ ನಿರೀಕ್ಷೆ ನಮ್ಮ ಸಮುದಾಯ ಹಾಗೂ ಕ್ಷೇತ್ರದ ಜನರಲ್ಲಿತ್ತು. ನಾನು ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಅವರು ಯಾವ ರೀತಿ ತೀರ್ಮಾನ ಮಾಡುತ್ತಾರೋ ನೋಡೋಣ' ಎಂದು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಹೇಳಿದರು.
ನಾನು ಮಂತ್ರಿಯಾಗಿ ನೀರಾವರಿ ಯೋಜನೆಗಳು ಜಾರಿ ಆಗುತ್ತವೆ ಎಂದು ಆಸೆ ಜನ ಇಟ್ಟುಕೊಂಡಿದ್ದರು. ಮೂರು ದಿನಗಳಿಂದಲೂ ಜನರನ್ನು ಸಮಾಧಾನಪಡಿಸುವ ಪ್ರಯತ್ನಿಸುತ್ತಿದ್ದೇನೆ. ಆದರೆ ಅದು ಆಗುತ್ತಿಲ್ಲ. ನಾನು ಇದನ್ನು ಸಿಎಂ, ಡಿಸಿಎಂ ಗಮನಕ್ಕೆ ತಂದಿದ್ದೇನೆ. ಮುಂದೆ ಅನಾಹುತಗಳು ಆಗಬಹುದು. ಪಕ್ಷದ ಮೇಲೆ ದುಷ್ಪರಿಣಾಮ ಆಗಬಹುದು ಎಂದು ಹೇಳಿದ್ದೇನೆ. ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ಇದರ ಮೇಲೆ ಏನು ತೀರ್ಮಾನ ಮಾಡ್ತಾರೋ ನೋಡೋಣ' ಎಂದರು.
"ಎಲ್ಲರೂ ಮಾಡುವುದು ಅಧಿಕಾರಕ್ಕಾಗಿ. ಅಧಿಕಾರ ಇದ್ರೆ ಸಾಧನೆ ಮಾಡಲು ಸಾಧ್ಯ.ಯೋಚನೆ ಮಾಡ್ತೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ ಎಂದೂ ಹೇಳಿದರು.
ಬಿಡಿಎ ಅಧ್ಯಕ್ಷ, ದೆಹಲಿಯ ವಿಶೇಷ ಪ್ರತಿನಿಧಿ, ಯೋಜನಾ ಆಯೋಗದ ಅಧ್ಯಕ್ಷ ಸ್ಥಾನ ವಿಚಾರದ ಬಗ್ಗೆ ಕೇಳಿದಾಗ, 'ನೋಡೊಣ ಏನು ಮಾಡುತ್ತಾರೋ ಗೊತ್ತಿಲ್ಲ. ನಾನು ಏನು ಕೇಳುತ್ತೇನೆ ಎನ್ನುವುದರ ಮೇಲೆ ಬರುವುದಿಲ್ಲ. ಅವರು ಏನು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ.ನಾನು ನಿರ್ದಿಷ್ಟವಾಗಿ ಏನನ್ನೂ ಕೇಳಿಲ್ಲ ಎಂದರು.
ಗ್ಯಾರಂಟಿಗಳ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸಚಿವ ಸಂಪುಟದಲ್ಲಿ ತೀರ್ಮಾನ ಆಗಬೇಕು. ಸಂಪನ್ಮೂಲಗಳ ಕ್ರೋಡೀಕರಣ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು. ತೀರ್ಮಾನಕ್ಕೆ ಬರೋವರೆಗೂ ಸಚಿವರು ವಿಶ್ಲೇಷಿಸುವುದು ಸರಿಯಲ್ಲ. ಸಚಿವ ಸಂಪುಟದಲ್ಲಿ ವಿಸ್ತ್ರತ ಚರ್ಚೆ ನಡೆದ ಬಳಿಕ ತೀರ್ಮಾನ ಆಗೋದು. ಹಾರಿಕೆ ಉತ್ತರ ಕೊಟ್ಟರೇ ಜನರ ಮನಸ್ಸಿನಲ್ಲಿ ಗೊಂದಲ ಮೂಡುತ್ತದೆ. ಹೀಗಾಗಿ ಯಾವ ಮಂತ್ರಿಗಳು ಮಾತಾಡಬಾರದು' ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.