ಬೆಂಗಳೂರು: ಪರೀಕ್ಷಾ ಕೇಂದ್ರಗಳ ಗೊಂದಲಗಳಿಂದ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಹಾಜರಾಗಲು ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಪರದಾಡಿದರು.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಬೆಳಿಗ್ಗೆ 9.30 ರಿಂದ 12 ಹಾಗೂ ಮಧ್ಯಾಹ್ನ 2ರಿಂದ 4.30ರವರೆಗೆ ನಡೆಯಿತು. ಪತ್ರಿಕೆ–1ರ ಪರೀಕ್ಷೆಗೆ 1,40,801 (ಶೇ 90.88) ಅಭ್ಯರ್ಥಿಗಳು, ಪತ್ರಿಕೆ–2ರ ಪರೀಕ್ಷೆಗೆ 1,92,112 (ಶೇ 93.88) ಅಭ್ಯರ್ಥಿಗಳು ಹಾಜರಾಗಿದ್ದರು.
ಬೆಳಿಗ್ಗೆ ನಡೆದ ಪತ್ರಿಕೆ 1ಕ್ಕೆ 1,54,929 ಅಭ್ಯರ್ಥಿಗಳು, ಮಧ್ಯಾಹ್ನ ನಡೆದ ಪತ್ರಿಕೆಗೆ 2ಕ್ಕೆ 06456 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪತ್ರಿಕೆ 1ರ ಪರೀಕ್ಷೆ589 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಪತ್ರಿಕೆ 2 ರ ಪರೀಕ್ಷೆ781 ಕೇಂದ್ರಗಳಲ್ಲಿ ನಿಗದಿಯಾಗಿತ್ತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವೆಬ್‌ಸೈಟ್‌ನಿಂದ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರೂ, ಪರೀಕ್ಷಾ ಪ್ರವೇಶ ಪತ್ರದಲ್ಲಿ ನಮೂದಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಿಗದಿಯಾಗಿರಲಿಲ್ಲ. ಕೆಲವೆಡೆ ನಮೂದಿಸಿದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ತಾಳೆಯಾಗುತ್ತಿರಲಿಲ್ಲ. ಕೊನೆಯ ಕ್ಷಣದಲ್ಲಿ ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡಪ್ರವೇಶ ಪತ್ರದ ಸಾಫ್ಟ್ ಪ್ರತಿ ತೋರಿಸಿದರೂ, ಪರೀಕ್ಷಾ ಮೇಲ್ವಿಚಾರಕರು ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎಂದು ಅಭ್ಯರ್ಥಿಗಳು ದೂರಿದರು.
‘ಟಿಇಟಿ ಪರೀಕ್ಷೆಗಾಗಿ ಬಳ್ಳಾರಿ ಜಿಲ್ಲೆಯಿಂದ ಬಂದಿದ್ದೇನೆ. ಮೂರು ದಿನಗಳ ಹಿಂದೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡಿದ್ದೆ. ಪರೀಕ್ಷಾ ಕೇಂದ್ರ ಚಿಕ್ಕಮಗಳೂರಿನ ಬೇಲೂರು ರಸ್ತೆ ಸರ್ಕಾರಿ ಪಿಯು ಕಾಲೇಜು ಎಂದು ನಮೂದಾಗಿತ್ತು. ಪರೀಕ್ಷಾ ಕೇಂದ್ರದ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಮತ್ತೆ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ನಂತರ ಬಸವನಹಳ್ಳಿ ಕಾಲೇಜು ಎಂದು ನಮೂದಾಗಿತ್ತು. ಸಮಯವಾದ್ದರಿಂದ ಪ್ರಿಂಟ್ ತೆಗೆದುಕೊಳ್ಳಲು ಆಗಲಿಲ್ಲ. ಆದರೆ, ಮೇಲ್ವಿಚಾರಕರು ಪ್ರವೇಶ ನಿರಾಕರಿಸಿದರು’ ಎಂದು ಅಭ್ಯರ್ಥಿ ಅವಿನಾಶ್ ದೂರಿದರು.
ಕಲಬುರಗಿ ಜಿಲ್ಲೆ ಜೀವರ್ಗಿ ತಾಲ್ಲೂಕು ಸೊನ್ನ ಗ್ರಾಮದ ಬಾಣಂತಿಯೊಬ್ಬರು 20 ದಿನದ ಕೂಸಿನೊಂದಿಗೆ ಬಂದು ಪರೀಕ್ಷೆ ಬರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.