ADVERTISEMENT

ಶಿಕ್ಷಕರ ವರ್ಗಾವಣೆ ಪೂರ್ಣ: ಮತ್ತೆ 15 ಸಾವಿರ ಅತಿಥಿ ಶಿಕ್ಷಕರ ನೇಮಕ

30,629 ಶಿಕ್ಷಕರಿಗೆ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 19:30 IST
Last Updated 14 ಆಗಸ್ಟ್ 2023, 19:30 IST
ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟ
ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟ   

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ–2020) ತಿದ್ದುಪಡಿ ಕಾಯ್ದೆಯ ಜಾರಿಯ ನಂತರ ಮೊದಲ ಬಾರಿ ನಡೆದ ವರ್ಗಾವಣೆಯ ಪ್ರಯೋಜನವನ್ನು ರಾಜ್ಯದ ಸರ್ಕಾರಿ ಶಾಲೆಗಳ 30,629 ಶಿಕ್ಷಕರು ಪಡೆದಿದ್ದಾರೆ.

ವರ್ಗಾವಣೆಯಿಂದ ತೆರವಾಗುವ ಸ್ಥಾನಕ್ಕೆ ಮತ್ತೆ 15 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ಕೋರಿ ಶಾಲಾ ಶಿಕ್ಷಣ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇದೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿತ್ತು. ಹೊಸ ಸ್ಥಳಗಳಿಗೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವ ಪ್ರಕ್ರಿಯೆ ಪೂರ್ಣಗೊಂಡರೆ ಉತ್ತರ ಕರ್ನಾಟಕ, ಮಲೆನಾಡು ಭಾಗದ ಶಾಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಾಗಲಿದೆ. ಹೀಗಾಗಿ, ಮತ್ತೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಹಿಂದೆ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇತ್ತು. ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷಗಳು ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಒಮ್ಮೆ ವರ್ಗಾವಣೆಯಾದವರು ಮೂರು ವರ್ಷಗಳ ನಂತರ ಮತ್ತೆ ವರ್ಗಾವಣೆಗೆ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ,  73 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ADVERTISEMENT

ಶಿಕ್ಷಕರಿಲ್ಲದ ಕಡೆ ಬಿಡುಗಡೆ ವಿಳಂಬ: ಪ್ರಾಥಮಿಕ ಶಾಲೆಯ 23,747 ಹಾಗೂ ಪ್ರೌಢಶಾಲೆಗಳ 6,882 ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ವರ್ಗಾವಣೆಯಾದವರು ಕೆಲ ಜಿಲ್ಲೆಗಳಲ್ಲಿ ತಾವು ಆಯ್ಕೆಮಾಡಿಕೊಂಡ ಶಾಲೆಗಳಿಗೆ ತರಳಿ ಕರ್ತವ್ಯಕ್ಕೆ ಈಗಾಗಲೇ ಹಾಜರಾಗಿದ್ದಾರೆ. ಕೆಲ ಜಿಲ್ಲೆಗಳ ಶಾಲೆಗಳಲ್ಲಿ ವರ್ಗಾವಣೆಯಾದವರನ್ನು ಕಳುಹಿಸಿದರೆ ಕಾಯಂ ಶಿಕ್ಷಕರು ಇಲ್ಲದಂತಾಗುತ್ತದೆ. ಅಂತಹ ಶಾಲೆಗಳಲ್ಲಿ ಬದಲಿ ವ್ಯವಸ್ಥೆ ಮಾಡುವವರಿಗೆ ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.