ADVERTISEMENT

ಕಲ್ಯಾಣ ಕರ್ನಾಟಕದ ಕೂಗಿಗೆ ದೊರೆತಿಲ್ಲ ಸಾಂತ್ವನ

ಶಿಕ್ಷಕರ ವರ್ಗಾವಣೆ ತಿದ್ದುಪಡಿ ಮಸೂದೆ: ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 20:44 IST
Last Updated 10 ಮಾರ್ಚ್ 2020, 20:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕುರಿತಂತೆ ವಿಧಾನಸಭೆಯಲ್ಲಿ ಮಂಡಿಸಿರುವ ಮಸೂದೆ ಹಲವಾರು ವಿಷಯಗಳಲ್ಲಿ ಉತ್ತಮ ಅಂಶಗಳನ್ನು ಹೊಂದಿದೆ. ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಿರುವುದನ್ನು ಮೆಚ್ಚಲೇಬೇಕು.

ಆದರೆ ಶಿಕ್ಷಕರು ಮಾಡಿರದ ತಪ್ಪಿಗೆ ಶಿಕ್ಷಕರಿಗೇಬರೆ ಎಳೆಯುವುದನ್ನು ತಪ್ಪಿಸುವ ಪ್ರಯತ್ನ ನಡೆಯದೆ ಇರುವುದು ಬೇಸರದ ಸಂಗತಿ.ಶೇ 20ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲ್ಲೂಕಿನಿಂದ ಅಂತರ ಘಟಕ ವರ್ಗಾವಣೆಗೆ ಅರ್ಜಿ ಸಲ್ಲಿಸುವಂತಿಲ್ಲಎಂಬ ನಿಯಮವನ್ನು ತೆಗೆದು ಹಾಕುವ ಪ್ರಸ್ತಾಪವಿಲ್ಲ. ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳದೆ, ಕಡಿಮೆ ಹಣದಲ್ಲಿ ಅತಿಥಿ ಶಿಕ್ಷಕರನ್ನು ತೆಗೆದುಕೊಂಡು ಖಾಲಿ ಹುದ್ದೆ ಭರ್ತಿ ಮಾಡದೆ ಬೋಧನೆ ಮಾಡಿಸುತ್ತಿದ್ದಾರೆ. ಹಾಗಾದರೆ ಆ ಅತಿಥಿ ಶಿಕ್ಷಕರನ್ನು ಸಹಖಾಲಿ ಹುದ್ದೆಯಿಂದ ತೆರವುಗೊಳಿಸಬಹುದಲ್ಲವೇ?

ಕಲ್ಯಾಣ ಕರ್ನಾಟಕ ಭಾಗದಿಂದ ಶೇ 20ರ ನಿಯಮ ತೆಗೆದರೆ ಹೆಚ್ಚು ಹೆಚ್ಚು ಶಿಕ್ಷಕರು ಹೋಗಿಬಿಡುತ್ತಾರೆ ಎಂಬ ಪೂರ್ವಗ್ರಹಪೀಡಿತ ಮನೋಭಾವ ಅಧಿಕಾರಿಗಳ ಹಂತದಲ್ಲಿದೆ. ಅದು ಸುಳ್ಳು. ಏಕೆಂದರೆ ಒಂದು ಜಿಲ್ಲೆಯಿಂದ ಹೊರ ಹೋಗುವ ಶಿಕ್ಷಕರ ಮಿತಿ ಶೇ 3ರಷ್ಟು ಹಾಗೂ ಹೆಚ್ಚುವರಿ ನಡೆದ ವರ್ಷ ಶೇ 2ರಷ್ಟು ಮಾತ್ರ. ಕನಿಷ್ಠ 50ರಿಂದ 100 ಜನ ಹೊರ ಹೋಗಲು ಮಾತ್ರ ಸಾಧ್ಯ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಘಟಕವೆಂದರೆ ಜಿಲ್ಲೆ, ಶೇ 3ರಷ್ಟು ಹೊರ ಹೋಗುವ ಶಿಕ್ಷಕರನ್ನು ನಿರ್ಧರಿಸುವುದು ಜಿಲ್ಲೆಯ ಒಟ್ಟು ಮಂಜೂರಾದ ಹುದ್ದೆಯಿಂದ. ಈ ನಿಯಮ ಅನ್ವಯಿಸುವಾಗ ಜಿಲ್ಲೆಯ ಖಾಲಿ ಹುದ್ದೆಗಳನ್ನು ಪರಿಗಣಿಸಬೇಕು ಹಾಗೂ ಅದರ ಮಿತಿಯನ್ನು 40ಕ್ಕೆ ಏರಿಸಬೇಕು.

ಕಡ್ಡಾಯ ವರ್ಗಾವಣೆಯಲ್ಲಿ ಪತಿ, ಪತ್ನಿ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲೇ ಇರುವ ಪತಿ, ಪತ್ನಿ ಶಿಕ್ಷಕರಿಗೆ ಅವರನ್ನು ಒಂದು ಮಾಡುವ ದೃಷ್ಟಿಕೋನದಿಂದ ಆ ನಿಯಮದಿಂದ ವಿನಾಯಿತಿ ನೀಡಿರುವಾಗ ಮದುವೆ ಆದಾಗಿನಿಂದ 10ರಿಂದ 14 ವರ್ಷದವರೆಗೆ(ಕೆಲವರಿಗೆ ಇನ್ನೂ ಮಕ್ಕಳಾಗಿಲ್ಲ) 500 ರಿಂದ 600 ಕಿ.ಮೀ. ದೂರ ಇರುವ ಪತಿ ಪತ್ನಿ ಶಿಕ್ಷಕಿಯರು ಈ ನಿಯಮದಿಂದ ವಿನಾಯಿತಿ ನೀಡಬೇಕಿತ್ತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ10 ವರ್ಷಗಳ ಕಡ್ಡಾಯ ಸೇವೆಯನ್ನು ತೆಗೆದುಹಾಕಬೇಕಿತ್ತು.ಕಲ್ಯಾಣ ಕರ್ನಾಟಕದ ಇರುವ ಖಾಲಿ ಹುದ್ದೆಗಳ ಭರ್ತಿ ಮಾಡುವ ಸಂಬಂಧ ಟಿಇಟಿ ಪಾಸಾದ ಎಲ್ಲ ಅಭ್ಯರ್ಥಿಗಳಿಗೆ ಸಿಇಟಿಯಲ್ಲಿ ಯಾವುದೇ ಮಾನದಂಡ ಅನುಸರಿಸದೆ ಶೇಕಡಾವಾರು ಆಧಾರವಾಗಿ ನೇಮಕಾತಿ ಮಡಿಕೊಂಡದ್ದೇ ಆದರೆ ಇರುವ ಎಲ್ಲ ಖಾಲಿ ಹುದ್ದೆಗಳುಒಂದೇ ಬಾರಿಗೆ ಭರ್ತಿಯಾಗುತ್ತವೆ. ಕಲ್ಯಾಣ ಕರ್ನಾಟಕ ಭಾಗದಪ್ರತಿಭಾವಂತ ಶಿಕ್ಷಕ ಆಕಾಂಕ್ಷಿಗಳಿಗೆ ಉದ್ಯೋಗ ಸಿಗುತ್ತದೆ ಹಾಗೂ ಶಿಕ್ಷಣ ಸಚಿವರ ಕೈಯಿಂದಲೇ ಅದಕ್ಕೆ ಅಡಿಗಲ್ಲು ಹಾಕಿದಂತಾಗುತ್ತದೆ.

–ಶೋಭಾ, ಶಿಕ್ಷಣ ತಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.