ADVERTISEMENT

ಶಿಕ್ಷಕರ ವರ್ಗಾವಣೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

ವಲಯ ವರ್ಗಾವಣೆ ಇಲ್ಲ; ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಷ್ಟೆ ಅವಕಾಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 0:03 IST
Last Updated 17 ಜೂನ್ 2024, 0:03 IST
<div class="paragraphs"><p>ವರ್ಗಾವಣೆ (ಪ್ರಾತಿನಿಧಿಕ ಚಿತ್ರ)</p></div>

ವರ್ಗಾವಣೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಈ ಬಾರಿ ಕೈಬಿಟ್ಟಿರುವ ಸರ್ಕಾರ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಷ್ಟೆ ಅವಕಾಶ ಕಲ್ಪಿಸಿದೆ.

ADVERTISEMENT

ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ವಲಯವಾರು ವರ್ಗಾವಣೆ ಈ ವರ್ಷ ಕೈಬಿಡುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿತ್ತು. ಹೀಗಾಗಿ, ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ವಲಯ ವರ್ಗಾವಣೆ ಕೈಬಿಟ್ಟು, ಇತರ ವರ್ಗಾವಣೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ.

ವರ್ಗಾವಣೆಗೆ ಅರ್ಜಿ ಇತ್ಯಾದಿ ಪ್ರಕ್ರಿಯೆಯನ್ನು ಮಾರ್ಚ್‌ 18ರಿಂದ ಇಲಾಖೆ ಆರಂಭಿಸಿತ್ತು. ಈ ಮಧ್ಯೆ, ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು.

ವರ್ಗಾವಣೆ ವೇಳಾಪಟ್ಟಿ: ನಿರ್ದಿಷ್ಟಪಡಿಸಿರುವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಇದೇ 18ರಂದು ಪ್ರಕಟಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಕರು 21ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. 24ರಂದು ಅಂತಿಮ ಆದ್ಯತಾ ಕರಡು ಪಟ್ಟಿ ಪ್ರಕಟವಾಗಲಿದೆ.

ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಜೂನ್‌ 20 ಕೊನೆಯ ದಿನ. ಅರ್ಜಿಗಳ ಪರಿಶೀಲನೆಗೆ ಕೊನೆಯ ದಿನ27. ಅರ್ಜಿ ಸಲ್ಲಿಸಿರುವ ಶಿಕ್ಷಕರ ಪೈಕಿ, ಜಿಲ್ಲೆಯ ಒಳಗೆ, ಹೊರಗೆ ವರ್ಗಾವಣೆಗೆ ಅರ್ಹ/ಅನರ್ಹರ ಪಟ್ಟಿ 29ರಂದು ಪ್ರಕಟವಾಗಲಿದೆ. 29ರಿಂದ ಜುಲೈ 5ರವರೆಗೆ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಜುಲೈ 8ರಂದು ತಾತ್ಕಾಲಿಕ ಆದ್ಯತಾ ಪಟ್ಟಿ, 10ರಂದು ಖಾಲಿ ಹುದ್ದೆಗಳ ಪಟ್ಟಿ, 18ರಂದು ಅಂತಿಮ ಆದ್ಯತಾ ಪಟ್ಟಿ ಪ್ರಕಟವಾಗಲಿದೆ.

ಜಿಲ್ಲಾ ಹಂತದ ವರ್ಗಾವಣೆಗೆ ಜುಲೈ 19 (ಪ್ರಾಥಮಿಕ ಶಾಲಾ ಶಿಕ್ಷಕರು) ಮತ್ತು 20ರಂದು (ಪ್ರೌಢ ಶಾಲಾ ಶಿಕ್ಷಕರು) ಕೌನ್ಸೆಲಿಂಗ್‌ ನಡೆಯಲಿದೆ. ಜುಲೈ 24ರಿಂದ 29ರವರೆಗೆ ಜ್ಯೇಷ್ಠತಾ ಪಟ್ಟಿಯಲ್ಲಿರುವಂತೆ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ನಡೆಯಲಿದೆ. ವಿಭಾಗೀಯ ಹಂತದ ವರ್ಗಾವಣೆಯು ಆಗಸ್ಟ್ 1ರಿಂದ 14ರವರೆಗೆ, ಅಂತರ್ ವಿಭಾಗೀಯ ವರ್ಗಾವಣೆ ಆಗಸ್ಟ್‌ 14ರಿಂದ 27ರವರೆಗೆ ನಡೆಯಲಿದೆ.

‘ತಾಂತ್ರಿಕ ಕಾರಣಗಳಿಗೆ ಅಡಚಣೆಯಾದರೆ ಈ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಲಿದೆ’ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.