ADVERTISEMENT

ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಪರದಾಟ

ಗುಣಮಟ್ಟವಿಲ್ಲದ ಅಭ್ಯರ್ಥಿಗಳು/ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ ಪ್ರಮಾಣ ಕುಸಿತ

ರೇಷ್ಮಾ ರವಿಶಂಕರ್
Published 3 ಮೇ 2019, 20:43 IST
Last Updated 3 ಮೇ 2019, 20:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ 10 ಸಾವಿರ ಶಿಕ್ಷಕರ ಭರ್ತಿಗೆ ಮುಂದಾಗಿರುವ ಶಿಕ್ಷಣ ಇಲಾಖೆಗೆ ಗುಣಮಟ್ಟದ ಶಿಕ್ಷಕರು ಸಿಗದೇ ಪರದಾಡುವಂತಾಗಿದೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಕಾಯಂ ಶಿಕ್ಷಕರ ನೇಮಕ ಕಷ್ಟವಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾಗಬೇಕು. ಆದರೆ ಸಾಕಷ್ಟು ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಇದರಿಂದಾಗಿ ಒಂದೋ ಹುದ್ದೆಗಳನ್ನು ಭರ್ತಿ ಮಾಡದೇ ಖಾಲಿ ಬಿಡಬೇಕು ಇಲ್ಲವಾದರೆ, ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ.

‘ಈ ವರ್ಷ ಸುಮಾರು 2,39,863 ಅಕಾಂಕ್ಷಿಗಳು ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲು ಬೇಕಿದ್ದ ಶೇ 55ರಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಗಿದ್ದು, ಶೇ 12.62ರಷ್ಟು ಅಭ್ಯರ್ಥಿಗಳಿಗೆ ಮಾತ್ರ. ಉಳಿದವರು ವಿಫಲರಾಗಿದ್ದಾರೆ. ಆದ್ದರಿಂದ, ಅತಿಥಿ ಶಿಕ್ಷಕರನ್ನು ನೇಮಿಸಲು ಉದ್ದೇಶಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ (ಪ್ರಭಾರಿ) ಎಂ.ಟಿ.ರೇಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ 27,000 ಶಿಕ್ಷಕರ ಕೊರತೆ ಇತ್ತು. ಹಣಕಾಸು ಇಲಾಖೆಯ ಅನುಮತಿ ಪಡೆದು 22 ಸಾವಿರ ಅತಿಥಿ ಶಿಕ್ಷಕರ ಸೇವೆ ಪಡೆದುಕೊಳ್ಳಲಾಗಿತ್ತು. ಈ ಶೈಕ್ಷಣಿಕ ವರ್ಷವೂ ಹೆಚ್ಚು ಕಮ್ಮಿ ಅಷ್ಟೇ ಪ್ರಮಾಣದ ಶಿಕ್ಷಕರ ಕೊರತೆ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ನಿಯಮ ಸಡಿಲಿಸಿ ಶಿಕ್ಷಕರನ್ನು ನೇಮಕ ಮಾಡುವ ಸಾಧ್ಯತೆಯನ್ನು ರೇಜು ತಳ್ಳಿಹಾಕಿದರು.

‘ಕಳೆದ ವರ್ಷ ಅರ್ಹತಾ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ಹೆಚ್ಚಿನ ಅರಿವು ಇರಲಿಲ್ಲ. ಕೋಚಿಂಗ್‌ ಸೆಂಟರ್‌ಗಳಿಗೂ ಏನು ಬೋಧಿಸಬೇಕು ಎಂಬ ತಿಳಿವಳಿಕೆ ಇರಲಿಲ್ಲ. ಇದರಿಂದ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ಅರ್ಹತಾ ಪರೀಕ್ಷೆಯ ಬಳಿಕ ತಿಳಿವಳಿಕೆ ಬಂದಿದೆ. ಕೆಲವು ಶಿಕ್ಷಕರ ಗುಂಪುಗಳ ಮತ್ತು ಹಿರಿಯರು ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಸುದೀರ್ಘ ಉತ್ತರ ಬರೆಯುವುದನ್ನೂ ಅಭ್ಯರ್ಥಿಗಳು ಕಲಿತುಕೊಳ್ಳುತ್ತಿದ್ದಾರೆ’ ಎಂದು ರೇಜು ತಿಳಿಸಿದರು.

ನೇಮಕ ಮತ್ತು ಪರೀಕ್ಷಾ ನಿಯಮಾವಳಿಗಳನ್ನು ಬದಲಿಸಬೇಕಾದರೆ, ಅದಕ್ಕೆ ವಿಧಾನಮಂಡಲದ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ. ನಿಯಮ ಬದಲಾವಣೆಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು.

ಈ ಸಮಸ್ಯೆಗೆ ಅತಿಥಿ ಶಿಕ್ಷಕರ ನೇಮಕ ಪರಿಹಾರವಲ್ಲ. ಅತಿಥಿ ಶಿಕ್ಷಕರು ನ್ಯಾಯ ಒದಗಿಸುವುದಿಲ್ಲ. ಇವರಿಗೆ ಉದ್ಯೋಗ ಅಥವಾ ಸಾಮಾಜಿಕ ಭದ್ರತೆ ಇರುವುದಿಲ್ಲ. ಅತಿ ಕಡಿಮೆ ಸಂಬಳ ಕೊಡುವುದರಿಂದ ಉತ್ತರದಾಯಿತ್ವವೂ ಇರುವುದಿಲ್ಲ ಎಂದು ಎನ್‌ಎಲ್‌ಎಸ್‌ಯುಐ ಸದಸ್ಯ ವಿ.ಪಿ.ನಿರಂಜನಾರಾಧ್ಯ ತಿಳಿಸಿದರು.

*
ಅತಿಥಿ ಶಿಕ್ಷಕರ ನೇಮಕ ಸರಿಯಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೇಮಕದ ಸಂದರ್ಭ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು.
-ನಾಗಸಿಂಹ ಜಿ ರಾವ್‌, ಮಕ್ಕಳ ಹಕ್ಕುಗಳ ಟ್ರಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.