ADVERTISEMENT

ಶಿಕ್ಷಕರ ವರ್ಗಾವಣೆ ಮುಂದಿನ ಶೈಕ್ಷಣಿಕ ವರ್ಷ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 19:45 IST
Last Updated 29 ಅಕ್ಟೋಬರ್ 2018, 19:45 IST
   

ಬೆಂಗಳೂರು: ಈಗಾಗಲೇ ಸ್ಥಗಿತಗೊಳಿಸಿರುವ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮುಂದುವರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ಈಗ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿರುವುದರಿಂದ ವರ್ಗಾವಣೆ ಮುಂದುವರಿಸುವುದು ಬೇಡ. ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅವರು ಅಧಿಕಾರಿಗಳಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ವರ್ಗಾವಣೆ ಕೌನ್ಸೆಲಿಂಗ್‌ಗೆ ಬಳಸುತ್ತಿರುವ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಉದ್ಭವಿಸಿದ್ದರಿಂದ ತಕ್ಷಣವೇ ಪ್ರಕ್ರಿಯೆ ನಿಲ್ಲಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದರು. ಇದರಿಂದಾಗಿ ವರ್ಗಾವಣೆ ನಿಲ್ಲಿಸಲಾಯಿತು. ತಂತ್ರಾಂಶಕ್ಕೆ ಸಾಕಷ್ಟು ತಪ್ಪು ಮಾಹಿತಿಗಳು ಅಪ್‌ಲೋಡ್‌ ಆಗಿದ್ದರಿಂದ ಭಾರಿ ಗೊಂದಲಕ್ಕೆ ಕಾರಣವಾಗಿತ್ತು. ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಗದೇ ಪರಿಸ್ಥಿತಿ ಅಧಿಕಾರಿಗಳ ಕೈಮೀರಿ ಹೋಗಿತ್ತು ಎಂದು ಮೂಲಗಳು ಹೇಳಿವೆ.

ADVERTISEMENT

ಗೊಂದಲದಿಂದ ಹಾಸನ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಿಕ್ಷಕರು ಆಕ್ರೋಶಗೊಂಡಿದ್ದರು. ಹಲವು ಕಡೆಗಳಲ್ಲಿ ಗಲಾಟೆಯೂ ಆಗಿತ್ತು. ಈ ಕುರಿತು ಸಾಕಷ್ಟು ದೂರುಗಳು ಶಿಕ್ಷಣ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಯವರಿಗೆ ಬಂದಿತ್ತು. ಅಲ್ಲದೆ,ಶೈಕ್ಷಣಿಕ ವರ್ಷದ ಕೊನೆಯಲ್ಲಿ ವರ್ಗಾವಣೆ ಮಾಡುವ ನೀತಿಯೇ ಸರಿಯಲ್ಲ. ವರ್ಗಾವಣೆ ನಿಲ್ಲಿಸುವುದು ಸೂಕ್ತ ಎಂದು ಕೆಲವರು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.